ನವದೆಹಲಿ: ಭಾರತೀಯ ಸೇನಾ ಪಡೆಗಳಲ್ಲಿ ಶಾಶ್ವತ ಸೈನಿಕರಾಗುವ ಆಶಯ ಹೊಂದಿದ ಅಗ್ನಿವೀರರಿಗೆ ಪರಿಷ್ಕೃತ ನಿಯಮಗಳನ್ನು ಕೇಂದ್ರ ಸರ್ಕಾರ ಜಾರಿಗೆ ತಂದಿದೆ.
ಅಗ್ನಿವೀರ ಸೈನಿಕರು ಕಾಯಂ ಹುದ್ದೆ ಪಡೆಯುವವರೆಗೆ ಮದುವೆಯಾಗಲು ಅವಕಾಶ ಇರುವುದಿಲ್ಲ. ಶಾಶ್ವತ ಸೇವೆಗೆ ಆಯ್ಕೆಯಾಗುವ ಪ್ರಕ್ರಿಯೆ ಶಿಸ್ತು ಕಾಪಾಡುವ ಉದ್ದೇಶದಿಂದ ಪರಿಷ್ಕೃತ ನಿಯಮ ರೂಪಿಸಲಾಗಿದೆ. ಹೊಸ ನಿಯಮದ ಪ್ರಕಾರ, ಅಗ್ನಿವೀರರು ಕಾಯಂ ಸೈನಿಕರಾಗುವ ಮೊದಲು ಮದುವೆಯಾದರೆ ಆತನನ್ನು ಶಾಶ್ವತ ಸೇವೆಗೆ ಅರ್ಹನಲ್ಲ ಎಂದು ಪರಿಗಣಿಸಲಾಗುವುದು. ಆತನ ಶಾಶ್ವತ ನೇಮಕಾತಿಗೆ ಅರ್ಜಿ ಸಲ್ಲಿಸುವ ಅವಕಾಶವನ್ನು ರದ್ದುಪಡಿಸಲಾಗುವುದು.
ಭಾರತೀಯ ಸೇನಾ ಪಡೆಗೆ ಕಾಯಂ ಸೈನಿಕರಾಗಿ ಆಯ್ಕೆಯಾಗುವ ಪ್ರಕ್ರಿಯೆ ಅತ್ಯಂತ ಸ್ಪರ್ಧಾತ್ಮಕವಾಗಿರುತ್ತದೆ. ದೈಹಿಕ ದಕ್ಷತಾ ಪರೀಕ್ಷೆ, ವೈದ್ಯಕೀಯ ತಪಾಸಣೆ, ಸೇವಾ ದಾಖಲೆಗಳ ಪರಿಶೀಲನೆ, ಸೇನೆಯ ಅಗತ್ಯತೆಗಳ ಆಧಾರದಲ್ಲಿ ಅಂತಿಮ ಪಟ್ಟಿಯನ್ನು ಸಿದ್ಧಪಡಿಸಲಾಗುವುದು. ಈ ಪ್ರಕ್ರಿಯೆ ಪೂರ್ಣಗೊಳ್ಳಲು ನಾಲ್ಕರಿಂದ ಆರು ತಿಂಗಳು ಕಾಲಾವಕಾಶ ಬೇಕಾಗುತ್ತದೆ. ಈ ಅವಧಿಯಲ್ಲಿ ಅಗ್ನಿವೀರರು ಮದುವೆಯಾಗಬಾರದು ಎಂಬುದು ಸೇನೆಯ ಸ್ಪಷ್ಟ ಸೂಚನೆಯಾಗಿದೆ. ಈ ಹಿನ್ನೆಲೆಯಲ್ಲಿ ಸೇನೆಯಲ್ಲಿ ಕಾಯಂ ಹುದ್ದೆ ಪಡೆಯುವವರೆಗೆ ಅಗ್ನಿವೀರರು ಮದುವೆಯಾಗಲು ಅವಕಾಶ ಇರುವುದಿಲ್ಲ ಎಂದು ಹೇಳಲಾಗಿದೆ.

