ಬೆಂಗಳೂರು: ಮದುವೆಗೂ ಮೊದಲೇ ಜನಿಸಿದ್ದ ನವಜಾತ ಗಂಡು ಶಿಶುವನ್ನು ರಸ್ತೆ ಬದಿ ಎಸೆದು ಹೋಗಿದ್ದ 19 ವರ್ಷದ ಯುವತಿ ಮತ್ತು ಆಕೆಯ ಅಜ್ಜಿಯನ್ನು ಮಾಗಡಿ ರಸ್ತೆ ಠಾಣೆ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.
ಕೆಲವು ದಿನಗಳ ಹಿಂದೆ ವೆಸ್ಟ್ ಆಫ್ ಕಾರ್ಡ್ ರಸ್ತೆ ಬದಿ ನವಜಾತ ಶಿಶು ಪತ್ತೆಯಾಗಿತ್ತು. ಈ ಬಗ್ಗೆ ಮಾಗಡಿ ರಸ್ತೆ ಠಾಣೆ ಪೊಲೀಸರು ತನಿಖೆ ನಡೆಸಿ ಘಟನಾ ಸ್ಥಳದ ಸಿಸಿ ಕ್ಯಾಮೆರಾಗಳನ್ನು ಪರಿಶೀಲಿಸಿದ್ದಾರೆ. ರಸ್ತೆ ಬದಿ ಬಟ್ಟೆಯಲ್ಲಿ ಸುತ್ತಿಕೊಂಡು ಬಂದು ಕಸವನ್ನು ಎಸೆದು ಯುವತಿ ಮತ್ತು ಅಜ್ಜಿ ಹೋಗುವ ದೃಶ್ಯಾವಳಿ ಪತ್ತೆಯಾಗಿದೆ.
ಈ ಸುಳಿವು ಆಧರಿಸಿ ಅನಾಥ ಶಿಶುವಿನ ತಾಯಿ ಮತ್ತು ಅಜ್ಜಿಯನ್ನು ಮಾಗಡಿ ರಸ್ತೆ ಠಾಣೆ ಪೊಲೀಸರು ಪತ್ತೆ ಹಚ್ಚಿದ್ದಾರೆ. ವಿವಾಹ ಪೂರ್ವ ಸಂಬಂಧದಿಂದ ಯುವತಿ ಗಂಡು ಮಗುವಿಗೆ ಜನ್ಮ ನೀಡಿದ್ದಳು. ಮಗುವನ್ನು ಒಪ್ಪಿಕೊಳ್ಳಲು ಪೋಷಕರು ಒಪ್ಪಿರಲಿಲ್ಲ. ಆಗ ಮೊಮ್ಮಗಳಿಗೆ ಶಿಶುವನ್ನು ಬಿಸಾಡುವಂತೆ ಅಜ್ಜಿ ಸಲಹೆ ನೀಡಿದ್ದು, ಅಂತೆಯೇ ವೆಸ್ಟ್ ಆಫ್ ಕಾರ್ಡ್ ರಸ್ತೆ ಸಮೀಪ ರಸ್ತೆ ಬದಿಯಲ್ಲಿ ಮಗುವನ್ನು ಎಸೆದು ಪರಾರಿಯಾಗಿದ್ದರು.

