ನವದೆಹಲಿ: ಪ್ರಸಕ್ತ 2025 -26ನೇ ಹಿಂಗಾರು ಹಂಗಾಮಿಗೆ ರೈತರಿಗೆ ನೀಡುವ ರಸಗೊಬ್ಬರದ ಸಬ್ಸಿಡಿ ಮೊತ್ತವನ್ನು ಕೇಂದ್ರ ಸರ್ಕಾರ ಹೆಚ್ಚಳ ಮಾಡಿದೆ.
ಹಿಂಗಾರು ಋತುವಿನಲ್ಲಿ ರೈತರಿಗೆ ನೀಡುವ ರಸಗೊಬ್ಬರದ ಸಬ್ಸಿಡಿಗಾಗಿ ಕೇಂದ್ರ ಸರ್ಕಾರ 37,952 ಕೋಟಿ ರೂಪಾಯಿ ವೆಚ್ಚ ಮಾಡಲಿದ್ದು, ಇದು ಬಜೆಟ್ ನಲ್ಲಿ ನಿಗದಿಪಡಿಸಿದ ಮೊತ್ತಕ್ಕಿಂತಲೂ ಸುಮಾರು 736 ಕೋಟಿ ರೂಪಾಯಿ ಹೆಚ್ಚಾಗಿದೆ. ಪ್ರಸಕ್ತ ಹಣಕಾಸು ವರ್ಷದಲ್ಲಿ ಹಿಂಗಾರು ಹಂಗಾಮು ಆರಂಭವಾಗುವ ಅ.1ರಿಂದ ಮಾರ್ಚ್ 31ರ ತನಕ ಡಿಎಪಿ ಮತ್ತು ಎನ್.ಪಿ.ಕೆ.ಎಸ್. ಶ್ರೇಣಿಗಳು ಸೇರಿದಂತೆ ರಸಗೊಬ್ಬರಗಳ ಸಬ್ಸಿಡಿ ದರಗಳಿಗೆ ಸರ್ಕಾರ ಅನುಮೋದನೆ ನೀಡಿದೆ ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವಾಲಯ ತಿಳಿಸಿದೆ.
ಕೃಷಿ ಕ್ಷೇತ್ರಕ್ಕೆ ಕೇಂದ್ರದ ಪೋಷಕಾಂಶ ಆಧಾರಿತ ಸಬ್ಸಿಡಿ ಯೋಜನೆಯ ದೇಶಿಯ ರಸಗೊಬ್ಬರ ಉತ್ಪಾದನೆಯಲ್ಲಿ ಶೇಕಡ 50ರಷ್ಟು ಬೆಳವಣಿಗೆಗೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ 2014ರಲ್ಲಿ 112.19 ಲಕ್ಷ ಮೆಟ್ರಿಕ್ ಟನ್ ಇದ್ದ ರಸಗೊಬ್ಬರ ಉತ್ಪಾದನೆ 2025 ರಲ್ಲಿ 168.55 ಲಕ್ಷ ಮೆಟ್ರಿಕ್ ಟನ್ ಗೆ ತಲುಪಿದೆ. ಕೇಂದ್ರ ಸರ್ಕಾರ ಸಬ್ಸಿಡಿಗಾಗಿ 2022-23, 2024 -25 ರಲ್ಲಿ 2.04 ಲಕ್ಷ ಕೋಟಿ ರೂ. ವಿನಿಯೋಗಿಸಿದೆ. ಹೀಗಾಗಿ ರೈತರಿಗೆ ಕೈ ಕಡಿಮೆ ದರದಲ್ಲಿ ರಸಗೊಬ್ಬರ ಲಭ್ಯವಾಗಿದ್ದು, ಇಳುವರಿಯಲ್ಲಿ ಗಣನೀಯ ಸುಧಾರಣೆಯಾಗಿದೆ. ಕೃಷಿಗೆ ದೊಡ್ಡ ಮಟ್ಟದ ಉತ್ತೇಜನ ಸಿಕ್ಕಿದೆ ಎಂದು ಹೇಳಲಾಗಿದೆ.

