ಮುಂಬೈನ ಮಲಾಡ್ ಪಶ್ಚಿಮದ ಹೋಟೆಲ್ ಒಂದರಲ್ಲಿ ತಂಗಿದ್ದ ಯುವಜೋಡಿಯೊಬ್ಬರು ತಮ್ಮ ಕೋಣೆಯಲ್ಲಿ ಅಡಗಿಸಿಟ್ಟಿದ್ದ ಗುಪ್ತ ಕ್ಯಾಮೆರಾವನ್ನು (Spy Camera) ಪತ್ತೆಹಚ್ಚುವ ಮೂಲಕ ದೊಡ್ಡ ಜಾಲವನ್ನು ಬಯಲಿಗೆಳೆದಿದ್ದಾರೆ. ಈ ಘಟನೆಯು ಹೋಟೆಲ್‌ಗಳಲ್ಲಿ ತಂಗುವ ಪ್ರಯಾಣಿಕರ ಸುರಕ್ಷತೆ ಮತ್ತು ಖಾಸಗಿತನದ ಬಗ್ಗೆ ತೀವ್ರ ಆತಂಕ ಮೂಡಿಸಿದೆ.
ಮಲಾಡ್‌ನ ದಫ್ತರಿ ರಸ್ತೆಯಲ್ಲಿರುವ ಪ್ರಗತಿ ಶಾಪಿಂಗ್ ಸೆಂಟರ್‌ನ ಮೂರನೇ ಮಹಡಿಯಲ್ಲಿರುವ ‘ಎ1 ಹೋಟೆಲ್’ (A1 Hotel) ನಲ್ಲಿ ಈ ಘಟನೆ ನಡೆದಿದೆ. ಹೋಟೆಲ್‌ನಲ್ಲಿ ತಂಗಿದ್ದ ದಂಪತಿಗಳು ಕೋಣೆಯ ಮೂಲೆ ಸಣ್ಣದೊಂದು ಅನುಮಾನಾಸ್ಪದ ವಸ್ತುವನ್ನು ಗಮನಿಸಿದ್ದಾರೆ. ಹತ್ತಿರ ಹೋಗಿ ಪರಿಶೀಲಿಸಿದಾಗ ಅದು ಅತ್ಯಂತ ಚಿಕ್ಕದಾದ, ಹೈ-ಡೆಫಿನಿಷನ್ ಸ್ಕೈ ಕ್ಯಾಮೆರಾ ಎಂಬುದು ತಿಳಿದುಬಂದಿದೆ. ಈ ಕ್ಯಾಮೆರಾವನ್ನು ಕೋಣೆಯ ಖಾಸಗಿ ಭಾಗಗಳನ್ನು ಸೆರೆಹಿಡಿಯುವಂತೆ ಅತ್ಯಂತ ಜಾಣ್ಮೆಯಿಂದ ಅಳವಡಿಸಲಾಗಿತ್ತು.
ಪೊಲೀಸ್ ಕ್ರಮ: ಕೂಡಲೇ ಎಚ್ಚೆತ್ತ ಜೋಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ದಿಂಡೋಷಿ ಮತ್ತು ಮಲಾಡ್ ಪೊಲೀಸರು ಉಪಕರಣವನ್ನು ವಶಪಡಿಸಿಕೊಂಡು ಹೋಟೆಲ್ ಮ್ಯಾನೇಜ್‌ಮೆಂಟ್ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ವಿಧಿವಿಜ್ಞಾನ ತಜ್ಞರು (Forensic Experts) ಈಗ ಆ ಕ್ಯಾಮೆರಾದಲ್ಲಿ ಏನೇನು ದಾಖಲಾಗಿದೆ ಮತ್ತು ಅದನ್ನು ಯಾರು ನಿಯಂತ್ರಿಸುತ್ತಿದ್ದರು ಎಂಬ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.ಹೋಟೆಲ್‌ನ ಒಳಗಿನ ಸಿಬ್ಬಂದಿ ಅಥವಾ ಹಳೆಯ ಉದ್ಯೋಗಿಗಳೇ ಈ ಕೃತ್ಯ ಎಸಗಿರಬಹುದು ಎಂಬ ಸಂಶಯದಲ್ಲಿ ಪೊಲೀಸರು ಹಲವಾರು ಜನರನ್ನು ವಿಚಾರಣೆಗೆ ಒಳಪಡಿಸಿದ್ದಾರೆ.

