ಬೆಂಗಳೂರು: ಕೋಗಿಲು ಬಡಾವಣೆಯಲ್ಲಿ ಆಕ್ರಮ ಶೆಡ್, ಮನೆ ತೆರವು ಪ್ರಕರಣದಲ್ಲಿ ಹೊರ ದೇಶದವರಿಗೆ ಮನೆ ನೀಡಿದಲ್ಲಿ ನ್ಯಾಯಾಲಯದಲ್ಲಿ ಪ್ರಶ್ನಿಸಲಾಗುವುದು. ರಾಜ್ಯಪಾಲರಿಗೆ ದೂರು ನೀಡಲಾಗುವುದು ಎಂದು ಬಿಜೆಪಿ ಶಾಸಕ ಎಸ್.ಆರ್. ವಿಶ್ವನಾಥ್ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಂದು ವೇಳೆ ಹೊರಗಿನವರಿಗೆ ಮನೆ ನೀಡಿದಲ್ಲಿ ನ್ಯಾಯಾಲಯ ಮೆಟ್ಟಿಲು ಹತ್ತುತ್ತೇವೆ. ರಾಜ್ಯಪಾಲರಿಗೆ ದೂರು ಕೊಡುತ್ತೇವೆ. ನಾಳೆ ಮನೆಗಳನ್ನು ಹಂಚಿಕೆ ಮಾಡುತ್ತಾರೆ ಎನ್ನಲಾಗಿದೆ. ತೆರವುಗೊಳಿಸಿದವರು ಇಲ್ಲಿ ವಾಸವಾಗಿರುವುದಕ್ಕೆ, ಐದು ವರ್ಷ ಇದ್ದಾರೆ ಎನ್ನುವುದಕ್ಕೆ ದಾಖಲೆ ಕೊಡಬೇಕು. 18 ದಾಖಲೆಗಳನ್ನು ಕೇಳಿದ್ದು, ಅವುಗಳನ್ನು ನೀಡಬೇಕು. ವಿಶೇಷ ಪ್ರಕರಣ ಎಂದೆಲ್ಲ ಮಾಡಲು ಆಗುವುದಿಲ್ಲ. ಕಾಂಗ್ರೆಸ್ ಹೈಕಮಾಂಡ್ ಹೇಳಿದೆ, ಕೇರಳ ಮುಖ್ಯಮಂತ್ರಿ ಹೇಳಿದ್ದಾರೆ, ಪಾಕಿಸ್ತಾನದವರು ಹೇಳಿದ್ದಾರೆ ಅಂದಾಕ್ಷಣ ಮನೆ ಕೊಡಲು ಹೊರಟಿದ್ದಾರೆ ಎಂದು ಕಿಡಿಕಾರಿದ್ದಾರೆ.
ಪಾಕಿಸ್ತಾನ, ಬಾಂಗ್ಲಾದಿಂದ ಬಂದಿರುವ ಹಿಂದೂ, ಕ್ರಿಶ್ಚಿಯನ್, ಸಿಖ್ ಸೇರಿ ಅನೇಕ ಅಲ್ಪಸಂಖ್ಯಾತರು ಬೀದಿಗಳಲ್ಲಿ ಅಲೆಯುತ್ತಿದ್ದಾರೆ. ಅವರಿಗೆ ಯಾವ ಸರ್ಕಾರಗಳು ಇದುವರೆಗೂ ಮನೆ ನೀಡಿಲ್ಲ. ಅವರಿಗೆ ಪೌರತ್ವ ಕೊಡಬೇಕು ಎಂದರೆ ಇದೇ ಕಾಂಗ್ರೆಸ್ ನವರು ವಿರೋಧ ವ್ಯಕ್ತಪಡಿಸಿದ್ದರು. ಈಗ ಬೇರೆ ದೇಶದಿಂದ ಬಂದವರಿಗೆ ಮನೆ ನೀಡುವ ತುರ್ತು ಏನಿದೆ ಎಂದು ಪ್ರಶ್ನಿಸಿದ್ದಾರೆ.

