ಚಿಕ್ಕಮಗಳೂರು: ಹೊಸ ವರ್ಷದ ಸಂಭ್ರಮಾಚರಣೆಗೆಂದು ಬೆಂಗಳೂರಿನಿಂದ ಚಿಕ್ಕಮಗಳೂರಿಗೆ ತೆರಳಿದ್ದ ಪೊಲೀಸ್ ಕಾನ್ಸ್ ಟೇಬಲ್ ಓರ್ವ ಚಹಾ ಅಂಗಡಿಯನ್ನು ಧ್ವಂಸಗೊಳಿಸಿ ಹಲ್ಲೆ ನಡೆಸಿರುವ ಘಟನೆ ನಡೆದಿದೆ.
ಚಿಕ್ಕಮಗಳೂರು ನಗರದ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ ಬಳಿ ಇರುವ ಟೀ ಅಂಗಡಿಯಲ್ಲಿ ಈ ಘಟನೆ ನಡೆದಿದೆ. ಮೀಸಲು ಪೊಲೀಸ್ ಪಡೆಯ ಕೋರಮಂಗಲ ಸಿಬ್ಬಂದಿ ಪುನೀತ್ ತನ್ನ ಸ್ನೇಹಿತರೊಂದಿಗೆ ಚಿಕ್ಕಮಗಳೂರಿಗೆ ಹೊಸ ವರ್ಷದ ಸಂಭ್ರಮಾಚರಣೆಗೆ ಹೋಗಿದ್ದಾರೆ. ಇಂದು ಮುಂಜಾನೆ ಕಾನ್ಸ್ ಟೇಬಲ್ ಪುನೀತ್ ಹಾಗೂ ಸ್ನೇಹಿತರು ಚಿಕ್ಕಬಳೂರು ಬಸ್ ನಿಲ್ದಾಣ ಬಳಿಕ ಟೀ ಅಂಗಡಿಗೆ ಟೀ ಕುಡಿಯಲು ಬಂದಿದ್ದಾರೆ. ಈ ವೇಳೆ ಟೀ ಕೊಡಲು ಸ್ವಲ್ಪ ತಡವಾಗಿದೆ. ಅಷ್ಟಕ್ಕೇ ಕಿರಿಕ್ ತೆಗೆದ ಪೊಲೀಸಪ್ಪ, ಟೀ ಅಂಗಡಿಯ ಕೆಲಸಗಾರನ ಮೇಲೆ ಮಾತಿಗೆ ಮಾತು ಬೆಳೆಸಿ ಹೊಡೆದು ಹಲ್ಲೆ ನಡೆಸಿದ್ದಾರೆ.
ಸಾಲದ್ದಕ್ಕೆ ಟೀ ಅಂಗಡಿಯಲ್ಲಿ ದಾಂಧಲೆ ನಡೆಸಿ ಅಂಗಡಿಯನ್ನೇ ಧ್ವಂಸ ಮಾಡಿದ್ದಾರೆ. ಅಂಗಡಿಯಲ್ಲಿದ್ದ ವಸ್ತುಗಳನ್ನೆಲ್ಲ ನೆಲಕ್ಕೆಸೆದು ರಂಪಾಟ ಮಾಡಿದ್ದಾರೆ. ಸ್ಥಳಕ್ಕಾಗಮಿಸಿದ ಪೊಲೀಸರು, ಕಾನ್ಸ್ ಟೆಬಲ್ ಪುನೀತ್ ನನ್ನು ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸಿದ್ದಾರೆ.

