ಪಾಟ್ನಾ: ಬಿಹಾರದ ಬೇಗುಸರಾಯ್ ಜಿಲ್ಲೆಯಲ್ಲಿ ಬುಧವಾರ ಭದ್ರತಾ ಸಿಬ್ಬಂದಿಯೊಂದಿಗೆ ನಡೆದ ಎನ್ ಕೌಂಟರ್ ನಲ್ಲಿ ತಲೆಗೆ 50,000 ರೂ. ಬಹುಮಾನ ಹೊಂದಿದ್ದ ನಕ್ಸಲೈಟ್ ಸಾವನ್ನಪ್ಪಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೃತನನ್ನು ನಿಷೇಧಿತ ಸಿಪಿಐ-ಮಾವೋವಾದಿಯ ಉತ್ತರ-ಬಿಹಾರ ಕೇಂದ್ರ ವಲಯ ಸಮಿತಿಯ ಕಾರ್ಯದರ್ಶಿ ದಯಾನಂದ್ ಮಾಲಾಕರ್ ಎಂದು ಗುರುತಿಸಲಾಗಿದೆ. ಅವರ ಇಬ್ಬರು ಸಹಚರರನ್ನು ಬಂಧಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಬಿಹಾರ ಪೊಲೀಸರ ವಿಶೇಷ ಕಾರ್ಯಪಡೆ(ಎಸ್ಟಿಎಫ್) ಬಿಡುಗಡೆ ಮಾಡಿದ ಹೇಳಿಕೆಯ ಪ್ರಕಾರ, 14 ಕ್ಕೂ ಹೆಚ್ಚು ಕ್ರಿಮಿನಲ್ ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿದ್ದ ನಕ್ಸಲ್ ಮಾಲಾಕರ್ ಅಲಿಯಾಸ್ ಚೋಟು, ಬುಧವಾರ ಸಂಜೆ ಬೇಗುಸರಾಯ್ನ ತೆಘ್ರಾ ಪ್ರದೇಶದಲ್ಲಿ ಎಸ್ಟಿಎಫ್ ಮತ್ತು ಜಿಲ್ಲಾ ಪೊಲೀಸರ ಜಂಟಿ ತಂಡದೊಂದಿಗೆ ನಡೆದ ಎನ್ಕೌಂಟರ್ ನಂತರ ಸಾವನ್ನಪ್ಪಿದ್ದಾನೆ.
ಸುಳಿವಿನ ಮೇರೆಗೆ ಭದ್ರತಾ ಸಿಬ್ಬಂದಿ ಮಾಲಕರ್ ತನ್ನ ಸಹಚರರೊಂದಿಗೆ ಅಡಗಿಕೊಂಡಿದ್ದ ಸ್ಥಳವನ್ನು ತಲುಪಿದರು. ಪೊಲೀಸ್ ಸಿಬ್ಬಂದಿಯನ್ನು ಗಮನಿಸಿದ ನಂತರ, ಮಾಲಾಕರ್ ತಪ್ಪಿಸಿಕೊಳ್ಳಲು ಪ್ರಯತ್ನಿಸಿ ಪೊಲೀಸರ ಮೇಲೆ ಗುಂಡು ಹಾರಿಸಿದ್ದಾರೆ. ಭದ್ರತಾ ಸಿಬ್ಬಂದಿ ಆತ್ಮರಕ್ಷಣೆಗಾಗಿ ಪ್ರತಿದಾಳಿ ನಡೆಸಿದ್ದಾರೆ. ಎನ್ಕೌಂಟರ್ನಲ್ಲಿ ನಕ್ಸಲ್ ಗಾಯಗೊಂಡು ಮೃತಪಟ್ಟಿದ್ದಾರೆ ಮತ್ತು ಅವರ ಇಬ್ಬರು ಸಹಚರರನ್ನು ಬಂಧಿಸಲಾಯಿತು ಎಂದು ತಿಳಿಸಲಾಗಿದೆ.
ಗಾಯಗೊಂಡಿದ್ದ ಮಾಲಾಕರ್ ಅವರನ್ನು ಹತ್ತಿರದ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಯಿತು, ಅಲ್ಲಿ ಅವರು ಸಾವನ್ನಪ್ಪಿದ್ದಾರೆ ಎಂದು ಘೋಷಿಸಲಾಯಿತು. ಎನ್ಕೌಂಟರ್ನಲ್ಲಿ ಯಾವುದೇ ಭದ್ರತಾ ಸಿಬ್ಬಂದಿಗೆ ಗಾಯಗಳಾಗಿಲ್ಲ. ಪೊಲೀಸರು ಸ್ಥಳದಿಂದ ಒಂದು 5.56 ಎಂಎಂ ಐಎನ್ಎಸ್ಎಎಸ್ ರೈಫಲ್, ಒಂದು ದೇಶೀಯ ನಿರ್ಮಿತ ಪಿಸ್ತೂಲ್, 25 ಜೀವಂತ ಕಾರ್ಟ್ರಿಡ್ಜ್ಗಳು ಮತ್ತು 15 ಬಳಸಿದ ಕಾರ್ಟ್ರಿಡ್ಜ್ಗಳನ್ನು ವಶಪಡಿಸಿಕೊಂಡರು.
ತಲೆಗೆ 50,000 ರೂ. ಬಹುಮಾನವನ್ನು ಹೊಂದಿದ್ದ ಮಾಲಾಕರ್ ಉತ್ತರ ಬಿಹಾರದಲ್ಲಿ ಹಲವಾರು ನಕ್ಸಲೈಟ್ ಕಾರ್ಯಾಚರಣೆಗಳಲ್ಲಿ ಭಾಗಿಯಾಗಿದ್ದ.

