ಕಲಬುರಗಿ: ಲಂಚ ಪಡೆಯುತ್ತಿದ್ದ ಹೈಕೋರ್ಟ್ ಸರ್ಕಾರಿ ಅಭಿಯೋಜಕ(ಪಬ್ಲಿಕ್ ಪ್ರಾಸಿಕ್ಯೂಟರ್) ಲೋಕಾಯುಕ್ತ ಬಲೆಗೆ ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದಿದ್ದಾರೆ.
ಕಲಬುರಗಿಯ ಕರ್ನಾಟಕ ಹೈಕೋರ್ಟ್ ಪೀಠದ ಸರ್ಕಾರಿ ಅಭಿಯೋಜಕ ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ವಶಕ್ಕೆ ಪಡೆದುಕೊಂಡಿದ್ದಾರೆ. ಪಬ್ಲಿಕ್ ಪ್ರಾಸಿಕ್ಯೂಟರ್ ರಾಜ ಮಹೇಂದ್ರ ಲೋಕಾಯುಕ್ತ ಬಲಗೆ ಬಿದ್ದವರು. ಜಾತಿ ನಿಂದನೆ ಪ್ರಕರಣದಲ್ಲಿ 50 ಸಾವಿರ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದರು.
ನವೀನ್ ಎಂಬುವವರ ಬಳಿ 50 ಸಾವಿರ ರೂ.ಗೆ ಬೇಡಿಕೆ ಇಟ್ಟಿದ್ದ ರಾಜ ಮಹೇಂದ್ರ ಮುಂಗಡವಾಗಿ 25 ಸಾವಿರ ರೂ. ಪಡೆದುಕೊಳ್ಳುವಾಗ ಲೋಕಾಯುಕ್ತ ಪೊಲೀಸರು ದಾಳಿ ಮಾಡಿದ್ದಾರೆ. ಅಟ್ರಾಸಿಟಿ ಪ್ರಕರಣದಲ್ಲಿ ಎದುರಾಳಿಗೆ ಸಹಕರಿಸಲು ರಾಜ ಮಹೇಂದ್ರ ಹೈಕೋರ್ಟ್ ಸಮೀಪ ಲಂಚ ಪಡೆಯುತ್ತಿದ್ದರು. ಅವರನ್ನು ವಶಕ್ಕೆ ಪಡೆದ ಲೋಕಾಯುಕ್ತ ಪೊಲೀಸರು ವಿಚಾರಣೆ ನಡೆಸಿದ್ದಾರೆ. ಲೋಕಾಯುಕ್ತ ಎಸ್ಪಿ ಸಿದ್ದರಾಜು, ಡಿವೈಎಸ್ಪಿ ಶೀಲವಂತರ ಅವರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿದೆ.

