ಆನ್‌ಲೈನ್ ವಂಚನೆಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಜನಸಾಮಾನ್ಯರು ತಿಳಿಯದೆಯೇ ಸೈಬರ್ ಕ್ರೈಂ ಬಲೆಯಲ್ಲಿ ಸಿಲುಕುತ್ತಿದ್ದಾರೆ. ನಿಮ್ಮ ಬ್ಯಾಂಕ್ ಖಾತೆಗೆ ನಿಮಗೆ ತಿಳಿಯದಂತೆ ಯಾರೋ ಅಪರಿಚಿತರು ಕೇವಲ 100 ರೂಪಾಯಿ ಹಾಕಿದರೂ ಸಹ, ನಿಮ್ಮ ಇಡೀ ಬ್ಯಾಂಕ್ ಖಾತೆ ಬ್ಲಾಕ್ ಆಗುವ ಸಾಧ್ಯತೆ ಇದೆ. ಹೌದು, ಇದು ಯಾವುದೇ ಅಪರಾಧ ಮಾಡದಿದ್ದರೂ ನಿಮ್ಮ ಖಾತೆಯನ್ನು ಸೈಬರ್ ಪೊಲೀಸರು ಸ್ಥಗಿತಗೊಳಿಸುವ (Lien) ಒಂದು ಗಂಭೀರ ಪ್ರಕ್ರಿಯೆಯಾಗಿದೆ.
ಏನಿದು ಮನಿ ಟ್ರಯಲ್? ಯಾವುದಾದರೂ ದೊಡ್ಡ ಮಟ್ಟದ ಆನ್‌ಲೈನ್ ವಂಚನೆ ನಡೆದಾಗ ಸೈಬರ್ ಪೊಲೀಸರು ಆ ಹಣ ಯಾವೆಲ್ಲಾ ಖಾತೆಗಳಿಗೆ ವರ್ಗಾವಣೆಯಾಗಿದೆ ಎಂಬುದನ್ನು ಪತ್ತೆಹಚ್ಚುತ್ತಾರೆ. ಇದನ್ನು ‘ಮನಿ ಟ್ರಯಲ್’ ಎನ್ನಲಾಗುತ್ತದೆ. ಸೈಬರ್ ಕಳ್ಳರು ಪೊಲೀಸರ ಕಣ್ಣು ತಪ್ಪಿಸಲು ತಾವು ಲೂಟಿ ಮಾಡಿದ ಹಣವನ್ನು ಸಣ್ಣ ಸಣ್ಣ ಮೊತ್ತದಲ್ಲಿ ನೂರಾರು ಸಾಮಾನ್ಯ ಜನರ ಖಾತೆಗಳಿಗೆ ಹಂಚುತ್ತಾರೆ. ಈ ಸರಪಳಿಯಲ್ಲಿ ನಿಮ್ಮ ಖಾತೆಗೆ ಕೇವಲ 100 ಅಥವಾ 200 ರೂಪಾಯಿ ಬಂದಿದ್ದರೂ ಸಹ, ಪೊಲೀಸರು ನಿಮ್ಮನ್ನು ಕೂಡ ಆ ವಂಚನೆ ಜಾಲದ ಭಾಗವೆಂದು ಶಂಕಿಸಿ ನಿಮ್ಮ ಇಡೀ ಖಾತೆಯನ್ನು ಫ್ರೀಜ್ ಮಾಡಲು ಬ್ಯಾಂಕ್‌ಗೆ ಆದೇಶಿಸುತ್ತಾರೆ.
ರಾಜಸ್ಥಾನ ಹೈಕೋರ್ಟ್‌ನ ಮಹತ್ವದ ತೀರ್ಪು ಒಂದು ವೇಳೆ ಇಂತಹ ಘಟನೆ ನಿಮ್ಮೊಂದಿಗೆ ನಡೆದರೆ ಗಾಬರಿಯಾಗುವ ಅಗತ್ಯವಿಲ್ಲ. ‘ಸೈಯದ್ ಸರ್ಫರಾಜ್ ವರ್ಸಸ್ ಆರ್ ಬಿ ಐ’ ಪ್ರಕರಣದಲ್ಲಿ ರಾಜಸ್ಥಾನ ಉಚ್ಚ ನ್ಯಾಯಾಲಯವು ಮಹತ್ವದ ತೀರ್ಪು ನೀಡಿದೆ. ಕೇವಲ ಒಂದು ಸಂಶಯಾಸ್ಪದ ವಹಿವಾಟಿಗಾಗಿ ಒಬ್ಬ ವ್ಯಕ್ತಿಯ ಇಡೀ ಬ್ಯಾಂಕ್ ಖಾತೆಯನ್ನು ಬ್ಲಾಕ್ ಮಾಡುವಂತಿಲ್ಲ ಎಂದು ಕೋರ್ಟ್ ಸ್ಪಷ್ಟಪಡಿಸಿದೆ. ವಂಚನೆ ನಡೆದಿದೆ ಎನ್ನಲಾದ ನಿರ್ದಿಷ್ಟ ಮೊತ್ತವನ್ನು ಮಾತ್ರ ತಡೆಹಿಡಿಯಬೇಕು (Hold), ಉಳಿದ ಮೊತ್ತವನ್ನು ಬಳಸಲು ಗ್ರಾಹಕರಿಗೆ ಅವಕಾಶ ನೀಡಬೇಕು ಎಂದು ನ್ಯಾಯಾಲಯ ಸೂಚಿಸಿದೆ.
ಖಾತೆ ಫ್ರೀಜ್ ಆದರೆ ಏನು ಮಾಡಬೇಕು?
- ಮೊದಲಿಗೆ ನಿಮ್ಮ ಬ್ಯಾಂಕ್ ಶಾಖೆಗೆ ಭೇಟಿ ನೀಡಿ, ಯಾವ ಸೈಬರ್ ಕ್ರೈಂ ವಿಭಾಗದಿಂದ ನಿಮ್ಮ ಖಾತೆಗೆ ತಡೆ ನೀಡಲಾಗಿದೆ ಎಂಬ ವಿವರಗಳನ್ನು ಪಡೆದುಕೊಳ್ಳಿ.
- ಬ್ಯಾಂಕ್ ಈ ಮಾಹಿತಿಯನ್ನು ನೀಡಲು ನಿರಾಕರಿಸುವಂತಿಲ್ಲ, ಪೊಲೀಸರಿಂದ ಮಾಹಿತಿ ಪಡೆಯಲು ಬ್ಯಾಂಕ್‌ಗೆ 7 ದಿನಗಳ ಕಾಲಾವಕಾಶವಿರುತ್ತದೆ.
- ಮಾಹಿತಿ ಸಿಕ್ಕ ನಂತರ ಸಂಬಂಧಪಟ್ಟ ಸೈಬರ್ ಪೊಲೀಸ್ ಕಚೇರಿಗೆ ಇಮೇಲ್ ಅಥವಾ ಫೋನ್ ಮೂಲಕ ಸಂಪರ್ಕಿಸಿ, ನಿಮ್ಮ ವಹಿವಾಟಿನ ದಾಖಲೆಗಳನ್ನು ನೀಡಿ ನಿಮ್ಮ ನಿರಪರಾಧಿತ್ವವನ್ನು ಸಾಬೀತುಪಡಿಸಿ.
- ಒಂದು ವೇಳೆ ಪೊಲೀಸರು ಸಹಕರಿಸದಿದ್ದರೆ, ವಕೀಲರ ಮೂಲಕ ಕಾನೂನು ನೋಟಿಸ್ ಕಳುಹಿಸಬಹುದು. ಸರಿಯಾದ ದಾಖಲೆ ನೀಡಿದರೆ ಸಾಮಾನ್ಯವಾಗಿ 15 ದಿನಗಳಲ್ಲಿ ಖಾತೆ ಮತ್ತೆ ಸಕ್ರಿಯವಾಗುತ್ತದೆ.

