ಬೆಂಗಳೂರು: ಮಹಿಳೆಯರ ಉಚಿತ ಪ್ರಯಾಣದ ಶಕ್ತಿ ಯೋಜನೆ ಜಾರಿಯಾಗಿ ಎರಡೂವರೆ ವರ್ಷವಾಗಿದ್ದು ಯೋಜನೆಯ ದುರ್ಬಳಕೆ ತಡೆಯಲು ಸಾರಿಗೆ ಇಲಾಖೆ ಸ್ಮಾರ್ಟ್ ಕಾರ್ಡ್ ನೀಡಲು ಮುಂದಾಗಿದೆ.
ಅರ್ಹರಿಗೆ ಮಾತ್ರ ಗ್ಯಾರಂಟಿ ಯೋಜನೆ ಸೌಲಭ್ಯ ತಲುಪಬೇಕೆಂಬ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಅನ್ನಭಾಗ್ಯ ಯೋಜನೆಯಡಿ ನಿಯಮ ಮೀರಿ ಬಿಪಿಎಲ್ ಕಾರ್ಡ್ ಪಡೆದಿದ್ದವರನ್ನು ಪತ್ತೆ ಮಾಡಿ ಪಡಿತರ ಚೀಟಿ ರದ್ದು ಮಾಡಲಾಗಿದೆ. ಗೃಹಲಕ್ಷ್ಮಿ ಯೋಜನೆಯಡಿ ಮಾಸಿಕ 2,000 ರೂ. ಪಡೆಯುತ್ತಿದ್ದ ಆದಾಯ ತೆರಿಗೆ ಪಾವತಿದಾರರನ್ನು ಗುರುತಿಸಿ ಕ್ರಮ ಕೈಗೊಳ್ಳಲಾಗಿದೆ.
ಇದೀಗ ಶಕ್ತಿ ಯೋಜನೆ ದುರ್ಬಳಕೆ ತಡೆಯಲು ಸ್ಮಾರ್ಟ್ ಕಾರ್ಡ್ ನೀಡಲು ಚಿಂತನೆ ನಡೆಸಿರುವ ಸಾರಿಗೆ ಇಲಾಖೆ ಅನುಮತಿ ಕೋರಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ. ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು.
ಅನ್ಯ ರಾಜ್ಯದ ಮಹಿಳೆಯರು ಉಚಿತ ಪ್ರಯಾಣದ ಶಕ್ತಿ ಯೋಜನೆ ಲಾಭ ಪಡೆಯುತ್ತಿದ್ದಾರೆ. ಈ ನಿಟ್ಟಿನಲ್ಲಿ ರಾಜ್ಯದ ಮಹಿಳೆಯರು ಮಾತ್ರ ಉಚಿತವಾಗಿ ಪ್ರಯಾಣಿಸಲು ಸ್ಮಾರ್ಟ್ ಕಾರ್ಡ್ ನೀಡಲು ಚಿಂತನೆ ನಡೆದಿದೆ. ಸಂಪುಟ ಸಭೆಯಲ್ಲಿ ನಿರ್ಧಾರ ಕೈಗೊಂಡ ಬಳಿಕ ಸೇವಾ ಸಿಂಧು ವೆಬ್ಸೈಟ್ ನಲ್ಲಿ ಸ್ಮಾರ್ಟ್ ಕಾರ್ಡ್ ಪಡೆಯಲು ಮಹಿಳೆಯರು ಅರ್ಜಿ ಸಲ್ಲಿಸಬೇಕಿದೆ.

