ಬೆಂಗಳೂರು: ಕೋಗಿಲು ಲೇಔಟ್ ನಲ್ಲಿ ಅನಧಿಕೃತವಾಗಿ ನಿರ್ಮಿಸಿದ್ದ ಮನೆಗಳನ್ನು ತೆರವುಗೊಳಿಸಲಾಗಿದ್ದು, ತೆರವಾದ ನಿವಾಸಿಗಳಿಗೆ ತಲಾ ಒಂದು ಮನೆ ನಿರ್ಮಿಸಿಕೊಡಲಾಗುವುದು
ಮುಖ್ಯಮಂತ್ರಿಗಳ ನಿವಾಸ ಕಾವೇರಿಯಲ್ಲಿ ನಡೆದ ಸಭೆಯ ನಂತರ ಸಿಎಂ ಸಿದ್ದರಾಮಯ್ಯ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಾರೆ. ನೋಟಿಸ್ ನೀಡಿದ ಬಳಿಕ ಮನೆಗಳನ್ನು ತೆರವುಗೊಳಿಸಲಾಗಿದೆ. ಡಿಸೆಂಬರ್ 20ರಂದು ಸುಮಾರು 167 ಮನೆಗಳನ್ನು ತೆರವುಗೊಳಿಸಲಾಗಿತ್ತು. ನಿನ್ನೆ ಸ್ಥಳಕ್ಕೆ ಸಚಿವ ಜಮೀರ್ ಅಹ್ಮದ್, ಇಂದು ಡಿಸಿಎಂ ಡಿ.ಕೆ. ಶಿವಕುಮಾರ್ ಭೇಟಿ ನೀಡಿದ್ದರು ಎಂದು ತಿಳಿಸಿದ್ದಾರೆ.
ಸರ್ಕಾರಿ ಜಾಗದಲ್ಲಿ ಅಕ್ರಮವಾಗಿ ಶೆಡ್ ನಿರ್ಮಿಸಿದ್ದರು. ಪರ್ಯಾಯ ವ್ಯವಸ್ಥೆ ಕಲ್ಪಿಸಲು ಇಂದಿನ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಅರ್ಹರಿಗೆ 7 ಕಿಲೋಮೀಟರ್ ಅಂತರದಲ್ಲಿ ಮನೆ ನಿರ್ಮಿಸಿ ಕೊಡುತ್ತೇವೆ. 11.2 ಲಕ್ಷ ರೂಪಾಯಿ ವೆಚ್ಚದಲ್ಲಿ ತಲಾ ಒಂದು ಮನೆ ನಿರ್ಮಿಸಿಕೊಡಲಾಗುವುದು. ನಾಳೆ, ನಾಡಿದ್ದು ಪರಿಶೀಲನೆ ನಡೆಸಿ ಅರ್ಹ ವ್ಯಕ್ತಿಗಳಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಲಾಗುವುದು. ಜಿಲ್ಲಾಧಿಕಾರಿ, ಪಾಲಿಕೆ ಅಧಿಕಾರಿಗಳು ನೀಡುವ ಪಟ್ಟಿ ಆಧರಿಸಿ ಮನೆ ನಿರ್ಮಿಸಲಾಗುವುದು. ಈ ಬಗ್ಗೆ ಕಾಂಗ್ರೆಸ್ ನಾಯಕ ವೇಣುಗೋಪಾಲ್ ನನ್ನೊಂದಿಗೆ, ಡಿ.ಕೆ. ಶಿವಕುಮಾರ್ ಜೊತೆಯೂ ಚರ್ಚೆ ನಡೆಸಿದ್ದಾರೆ ಎಂದು ಹೇಳಿದ್ದಾರೆ.

