ತೆಲಂಗಾಣದ ಜಗತಿಯಾಲ ಜಿಲ್ಲೆಯಲ್ಲಿ ಖಾಸಗಿ ವಿಡಿಯೋ ಮುಂದಿಟ್ಟುಕೊಂಡು ಬ್ಲ್ಯಾಕ್‌ಮೇಲ್ ಮಾಡುತ್ತಿದ್ದ ವ್ಯಕ್ತಿಯೊಬ್ಬನನ್ನು ಇಬ್ಬರು ಸಹೋದರಿಯರು ತಮ್ಮ ಸಂಬಂಧಿಕರೊಂದಿಗೆ ಸೇರಿ ಹೊಡೆದು ಕೊಂದಿರುವ ಭೀಕರ ಘಟನೆ ನಡೆದಿದೆ. ಡಿಸೆಂಬರ್ 26ರಂದು ಈ ಘಟನೆ ನಡೆದಿದ್ದು, ಪ್ರಸ್ತುತ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಪ್ರಕರಣದ ಹಿನ್ನೆಲೆ
ಕೊಲೆಯಾದ ವ್ಯಕ್ತಿಯನ್ನು ಪೆದ್ದಪಲ್ಲಿ ಜಿಲ್ಲೆಯ ತುರ್ಕಲಮದ್ದಿಕುಂಟ ಗ್ರಾಮದ ಬುರ್ರಾ ಮಹೇಂದರ್ (32) ಎಂದು ಗುರುತಿಸಲಾಗಿದೆ. ಹೈದರಾಬಾದ್‌ನಲ್ಲಿ ಮೆಡಿಕಲ್ ರಿಪ್ರೆಸೆಂಟೇಟಿವ್ ಆಗಿ ಕೆಲಸ ಮಾಡುತ್ತಿದ್ದ ಮಹೇಂದರ್‌ಗೆ ಜಗತಿಯಾಲ ಮೂಲದ ಸಾಫ್ಟ್‌ವೇರ್ ಇಂಜಿನಿಯರ್ ಯುವತಿಯೊಂದಿಗೆ ಪರಿಚಯವಾಗಿತ್ತು. ಈ ಪರಿಚಯ ಪ್ರೇಮಕ್ಕೆ ತಿರುಗಿದ್ದು, ಈ ನಡುವೆ ಮಹೇಂದರ್ ಆಕೆಯ ಅಕ್ಕನೊಂದಿಗೂ ಸಂಬಂಧ ಬೆಳೆಸಿದ್ದ ಎನ್ನಲಾಗಿದೆ.
ಬ್ಲ್ಯಾಕ್‌ಮೇಲ್ ಮತ್ತು ಹಲ್ಲೆ
ಇತ್ತೀಚೆಗೆ ಸಾಫ್ಟ್‌ವೇರ್ ಇಂಜಿನಿಯರ್ ಯುವತಿಗೆ ಮದುವೆಯ ಸಂಬಂಧ ಬಂದಿತ್ತು. ಈ ವಿಚಾರ ತಿಳಿದ ಮಹೇಂದರ್, ಯುವತಿಯ ಖಾಸಗಿ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವುದಾಗಿ ಬೆದರಿಕೆ ಹಾಕಲು ಶುರು ಮಾಡಿದ್ದ. ಇದರಿಂದ ಆಕ್ರೋಶಗೊಂಡ ಸಹೋದರಿಯರು ಮಹೇಂದರ್‌ನನ್ನು ಕೊಲ್ಲಲು ಸಂಚು ರೂಪಿಸಿದ್ದರು. ಪ್ಲಾನ್ ಪ್ರಕಾರ ಯುವತಿಯು ಮಹೇಂದರ್‌ನನ್ನು ಭೇಟಿಯಾಗಲು ಕರೆದಿದ್ದಳು. ಆತ ಸ್ಥಳಕ್ಕೆ ಬಂದಾಗ ಅಲ್ಲಿ ಮೊದಲೇ ಕಾದು ಕುಳಿತಿದ್ದ ಸಹೋದರಿಯರು ಮತ್ತು ಅವರ ಸಂಬಂಧಿಕರು ಮಹೇಂದರ್ ಮೇಲೆ ಮುಗಿಬಿದ್ದಿದ್ದಾರೆ.
ಮೆಣಸಿನ ಪುಡಿ ಎರಚಿ ಕೃತ್ಯ
ಜಗಳ ವಿಕೋಪಕ್ಕೆ ಹೋದಾಗ ಸಂಬಂಧಿಕರು ಮಹೇಂದರ್ ಕಣ್ಣಿಗೆ ಮೆಣಸಿನ ಪುಡಿ ಎರಚಿ, ಕೋಲುಗಳಿಂದ ಮನಬಂದಂತೆ ಥಳಿಸಿದ್ದಾರೆ. ತೀವ್ರವಾಗಿ ಗಾಯಗೊಂಡಿದ್ದ ಆತನನ್ನು ಜಗತಿಯಾಲ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ. ಜಗತಿಯಾಲ ಗ್ರಾಮಾಂತರ ಪೊಲೀಸರು ಈ ಬಗ್ಗೆ ಮಾಹಿತಿ ನೀಡಿದ್ದು, ಸಹೋದರಿಯರು ಮತ್ತು ಅವರ ಸಂಬಂಧಿಕರ ಮೇಲೆ ಭಾರತೀಯ ನ್ಯಾಯ ಸಂಹಿತೆಯ (BNS) ಸೆಕ್ಷನ್ 103ರ ಅಡಿಯಲ್ಲಿ ಕೊಲೆ ಪ್ರಕರಣ ದಾಖಲಿಸಿದ್ದಾರೆ.

