ಹಾವೇರಿ: ರಾಜ್ಯದಲ್ಲಿ ಸಿಎಂ ಬದಲಾವಣೆ ವಿಚಾರಕ್ಕೆ ಸಂಬಂಧಿಸಿದಂತೆ ತಮ್ಮ ನಿಖರ ಭವಿಷ್ಯಕ್ಕೆ ಹೆಸರಾದ ಕೋಡಿಮಠ ಸಂಸ್ಥಾನದ ಡಾ. ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಭವಿಷ್ಯ ನುಡಿದಿದ್ದಾರೆ.
ಹಾವೇರಿಯಲ್ಲಿ ಮಾತನಾಡಿದ ಕೋಡಿಮಠದ ಸ್ವಾಮೀಜಿ, ಹಂಬಲಿ ಹಳಸಿತು ಕಂಬಳಿ ಹಾಸಿತು ಅಂತ ಹೇಳಿದ್ದೆ. ನಾನು ಕೈಲಾಸದಲ್ಲಿ ಕೈ ಪೂಜೆ ಮಾಡುತ್ತದೆ ಎಂದು ಸಹ ಹೇಳಿದ್ದೆ. ಅಕ್ಕ-ಬುಕ್ಕರು ವಿಜಯನಗರ ಸಾಮ್ರಾಜ್ಯ ಉಳಿಸಿದರು. ಸಂಗೊಳ್ಳಿ ರಾಯಣ್ಣ ಕಿತ್ತೂರು ಸಾಮ್ರಾಜ್ಯ ಉಳಿಸಿದರು. ಕುರುಬ ಸಮಾಜದವರು ಪ್ರಕೃತಿಯಲ್ಲಿ ಭವಿಷ್ಯ ಕಂಡವರು. ಹಾಲುಮತ ಸಮಾಜ ದೈವ ಬಲವುಳ್ಳ ಪುರಾತನ ಮತವಾಗಿದೆ. ಹಾಲುಮತದಿಂದ ಅಧಿಕಾರ ಬಿಡಿಸಿಕೊಳ್ಳುವುದು ಕಷ್ಟ ಎಂದು ಹೇಳಿದ್ದಾರೆ.
ನಿನ್ನೆ ಬೆಳಗಾವಿಯಲ್ಲಿ ಮಾತನಾಡಿದ್ದ ಶ್ರೀಗಳು, ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕಾರ ಬಿಟ್ಟು ಕೊಟ್ಟರೆ ಮಾತ್ರ ಬೇರೆಯವರಿಗೆ ಅವಕಾಶ ಇದೆ. ಹಾಲುಮತ ಸಮಾಜದಿಂದ ಅಧಿಕಾರ ಕಿತ್ತುಕೊಳ್ಳುವುದು ಕಷ್ಟ. ಅವರಾಗಿಯೇ ಬಿಟ್ಟರೆ ಮಾತ್ರ ಬೇರೆಯವರಿಗೆ ಅಧಿಕಾರ ಸಿಗುತ್ತದೆ. ಸಿದ್ದರಾಮಯ್ಯನವರು ಅಧಿಕಾರ ಬಿಟ್ಟು ಕೊಟ್ಟರೆ ಮಾತ್ರ ಡಿ.ಕೆ. ಶಿವಕುಮಾರ್ ಗೆ ಅಧಿಕಾರ ಸಿಗುತ್ತದೆ. ಇಲ್ಲದಿದ್ದರೆ ಇಲ್ಲ ಎಂದು ಹೇಳಿದ್ದರು.

