ಟೀಮ್ ಇಂಡಿಯಾದ ಮಾಜಿ ನಾಯಕ, ‘ಕ್ಯಾಪ್ಟನ್ ಕೂಲ್’ ಖ್ಯಾತಿಯ ಮಹೇಂದ್ರ ಸಿಂಗ್ ಧೋನಿ ಅಂತರಾಷ್ಟ್ರೀಯ ಕ್ರಿಕೆಟ್ಗೆ ವಿದಾಯ ಹೇಳಿ ವರ್ಷಗಳೇ ಕಳೆದರೂ, ಅವರ ಮೇಲಿನ ಅಭಿಮಾನ ಮಾತ್ರ ಕಿಂಚಿತ್ತೂ ಕಡಿಮೆಯಾಗಿಲ್ಲ. 2020ರಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್ನಿಂದ ನಿವೃತ್ತರಾದ ಧೋನಿ ಅವರಿಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಪ್ರತಿ ತಿಂಗಳು ಎಷ್ಟು ಪೆನ್ಷನ್ ನೀಡುತ್ತದೆ ಎಂಬ ಕುತೂಹಲ ಅನೇಕರಲ್ಲಿದೆ. ಆ ಮೊತ್ತದ ವಿವರ ಇಲ್ಲಿದೆ.
ಬಿಸಿಸಿಐ ಪೆನ್ಷನ್ ನಿಯಮವೇನು?
ಮಾಜಿ ಕ್ರಿಕೆಟಿಗರಿಗೆ ನಿವೃತ್ತಿಯ ನಂತರ ಆರ್ಥಿಕ ಭದ್ರತೆ ನೀಡಲು ಬಿಸಿಸಿಐ ವಿಶೇಷ ಪಿಂಚಣಿ ಯೋಜನೆಯನ್ನು ಹೊಂದಿದೆ. ಒಬ್ಬ ಆಟಗಾರ ಎಷ್ಟು ಅಂತರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ ಮತ್ತು ಯಾವ ಹಂತದ ಕ್ರಿಕೆಟ್ ಪ್ರತಿನಿಧಿಸಿದ್ದಾರೆ ಎನ್ನುವುದರ ಮೇಲೆ ಈ ಮೊತ್ತ ನಿರ್ಧಾರವಾಗುತ್ತದೆ. 2022ರಲ್ಲಿ ಬಿಸಿಸಿಐ ಈ ಮೊತ್ತವನ್ನು ಪರಿಷ್ಕರಿಸಿದ್ದು, ಮಾಜಿ ಆಟಗಾರರಿಗೆ ಸಿಗುವ ಮಾಸಿಕ ಪಿಂಚಣಿಯನ್ನು ಹೆಚ್ಚಿಸಿದೆ.
ಹೊಸ ನಿಯಮದ ಪ್ರಕಾರ:
- 25ಕ್ಕಿಂತ ಹೆಚ್ಚು ಟೆಸ್ಟ್ ಪಂದ್ಯಗಳನ್ನು ಆಡಿದ ಮಾಜಿ ಕ್ರಿಕೆಟಿಗರಿಗೆ ಪ್ರತಿ ತಿಂಗಳು 70,000 ರೂಪಾಯಿ ಪಿಂಚಣಿ ನೀಡಲಾಗುತ್ತದೆ.
- ಉಳಿದ ಟೆಸ್ಟ್ ಆಟಗಾರರಿಗೆ 60,000 ರೂಪಾಯಿ ಹಾಗೂ ಪ್ರಥಮ ದರ್ಜೆ ಕ್ರಿಕೆಟಿಗರಿಗೆ 30,000 ರೂಪಾಯಿ ನೀಡಲಾಗುತ್ತದೆ.
- ಮಹಿಳಾ ಅಂತರಾಷ್ಟ್ರೀಯ ಕ್ರಿಕೆಟಿಗರಿಗೆ 52,500 ರೂಪಾಯಿ ಪಿಂಚಣಿ ನಿಗದಿಯಾಗಿದೆ.
ಧೋನಿ ಖಾತೆಗೆ ಬರುವ ಮೊತ್ತವೆಷ್ಟು?
ಎಂ.ಎಸ್. ಧೋನಿ ಭಾರತದ ಪರ 90 ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ. ಬಿಸಿಸಿಐ ನಿಯಮದಂತೆ 25ಕ್ಕಿಂತ ಹೆಚ್ಚು ಟೆಸ್ಟ್ ಪಂದ್ಯ ಆಡಿರುವ ಕಾರಣ, ಧೋನಿ ಅವರು ಅತ್ಯುನ್ನತ ಪಿಂಚಣಿ ಶ್ರೇಣಿಗೆ ಅರ್ಹರಾಗಿದ್ದಾರೆ. ಇದರಂತೆ ಬಿಸಿಸಿಐ ಪ್ರತಿ ತಿಂಗಳು ಧೋನಿ ಅವರಿಗೆ 70,000 ರೂಪಾಯಿ ಪಿಂಚಣಿ ಹಣವನ್ನು ನೀಡುತ್ತದೆ.
ಐಪಿಎಲ್ ಮತ್ತು ನಿವ್ವಳ ಆಸ್ತಿ
ಧೋನಿಗೆ ಬರುವ ಈ ಪಿಂಚಣಿ ಮೊತ್ತವು ಅವರ ಒಟ್ಟು ಗಳಿಕೆಗೆ ಹೋಲಿಸಿದರೆ ಬಹಳ ಸಣ್ಣದಾಗಿ ಕಂಡರೂ, ಇದು ಬಿಸಿಸಿಐ ತನ್ನ ಹಿರಿಯ ಆಟಗಾರರಿಗೆ ನೀಡುವ ಗೌರವವಾಗಿದೆ. ಸದ್ಯ ಧೋನಿ ಅವರ ಒಟ್ಟು ಆಸ್ತಿ ಮೌಲ್ಯ ಸುಮಾರು 1,000 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ. 2025ರ ಐಪಿಎಲ್ನಲ್ಲಿ ಕೂಡ ಧೋನಿ ಚೆನ್ನೈ ಸೂಪರ್ ಕಿಂಗ್ಸ್ ಪರ ಅನ್ಕ್ಯಾಪ್ಡ್ ಆಟಗಾರನಾಗಿ 4 ಕೋಟಿ ರೂಪಾಯಿ ಒಪ್ಪಂದದಡಿ ಆಡುತ್ತಿದ್ದಾರೆ.
2004ರಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ್ದ ಧೋನಿ, ಭಾರತಕ್ಕೆ ಎರಡು ವಿಶ್ವಕಪ್ ಹಾಗೂ ಒಂದು ಚಾಂಪಿಯನ್ಸ್ ಟ್ರೋಫಿ ಗೆದ್ದುಕೊಡುವ ಮೂಲಕ ಯಶಸ್ವಿ ನಾಯಕನಾಗಿ ಇತಿಹಾಸ ನಿರ್ಮಿಸಿದ್ದಾರೆ.

