ಇಂದಿನ ಆಧುನಿಕ ಯುಗದಲ್ಲಿ ಮೊಬೈಲ್ ಫೋನ್ ಇಲ್ಲದೆ ಒಂದು ಕ್ಷಣವೂ ಕಳೆಯುವುದು ಕಷ್ಟ. ಆದರೆ 1.50 ಲಕ್ಷ ಕೋಟಿ ರೂಪಾಯಿ ಮೌಲ್ಯದ ಬೃಹತ್ ಉದ್ಯಮ ಸಾಮ್ರಾಜ್ಯವನ್ನು ಹೊಂದಿದ್ದರೂ ಇಂದಿಗೂ ಸ್ಮಾರ್ಟ್‌ಫೋನ್ ಬಳಸದ ಅಪರೂಪದ ವ್ಯಕ್ತಿಯೊಬ್ಬರಿದ್ದಾರೆ. ಅವರೇ ಶ್ರೀರಾಮ್ ಗ್ರೂಪ್ ಸಂಸ್ಥಾಪಕ ಆರ್. ತ್ಯಾಗರಾಜನ್. ದಿವಂಗತ ರತನ್ ಟಾಟಾ ಅವರಂತೆ ಅತ್ಯಂತ ಸರಳ ಜೀವನ ನಡೆಸುವ ಇವರು, ಸಾವಿರಾರು ಕೋಟಿ ರೂಪಾಯಿಗಳನ್ನು ಸಮಾಜ ಸೇವೆಗಾಗಿ ದಾನ ಮಾಡಿ ಸುದ್ದಿಯಾಗಿದ್ದಾರೆ.
ಶ್ರೀಮಂತ ಕೃಷಿ ಕುಟುಂಬದಲ್ಲಿ ಜನಿಸಿದ ರಾಮಮೂರ್ತಿ ತ್ಯಾಗರಾಜನ್ ಅವರು ಚೆನ್ನೈನಲ್ಲಿ ಗಣಿತ ವಿಷಯದಲ್ಲಿ ಪದವಿ ಪಡೆದ ನಂತರ, ಕೋಲ್ಕತ್ತಾದ ಇಂಡಿಯನ್ ಸ್ಟ್ಯಾಟಿಸ್ಟಿಕಲ್ ಇನ್‌ಸ್ಟಿಟ್ಯೂಟ್‌ನಲ್ಲಿ ಉನ್ನತ ವ್ಯಾಸಂಗ ಮಾಡಿದರು. 1961ರಲ್ಲಿ ನ್ಯೂ ಇಂಡಿಯಾ ಅಶ್ಯೂರೆನ್ಸ್ ಕಂಪನಿಯಲ್ಲಿ ವೃತ್ತಿ ಜೀವನ ಆರಂಭಿಸಿದ ಇವರು, ಬ್ಯಾಂಕಿಂಗ್ ಮತ್ತು ಹಣಕಾಸು ಕ್ಷೇತ್ರದಲ್ಲಿ ಸುಮಾರು 20 ವರ್ಷಗಳ ಅನುಭವ ಪಡೆದರು.
ಸಾಮಾನ್ಯರಿಗಾಗಿ ಹುಟ್ಟಿದ ‘ಶ್ರೀರಾಮ್ ಚಿಟ್ಸ್’
ತಮ್ಮ 37ನೇ ವಯಸ್ಸಿನಲ್ಲಿ ಸ್ನೇಹಿತರೊಂದಿಗೆ ಸೇರಿ ‘ಶ್ರೀರಾಮ್ ಚಿಟ್ಸ್’ ಸಂಸ್ಥೆಯನ್ನು ಆರಂಭಿಸಿದರು. ಸಾಂಪ್ರದಾಯಿಕ ಬ್ಯಾಂಕುಗಳಿಂದ ಸಾಲ ಪಡೆಯಲು ಸಾಧ್ಯವಾಗದ ಬಡವರು ಮತ್ತು ಮಧ್ಯಮ ವರ್ಗದ ಜನರಿಗೆ ಹಣಕಾಸಿನ ನೆರವು ನೀಡುವುದು ಇವರ ಮುಖ್ಯ ಉದ್ದೇಶವಾಗಿತ್ತು. ಲಾರಿ ಚಾಲಕರು ಮತ್ತು ಸಣ್ಣ ಉದ್ಯಮಿಗಳಿಗೆ ಇವರು ನೀಡಿದ ಸಾಲದ ನೆರವು ಇಂದು ಲಕ್ಷಾಂತರ ಜನರ ಬದುಕನ್ನೇ ಬದಲಿಸಿದೆ. ಪ್ರಸ್ತುತ ಶ್ರೀರಾಮ್ ಗ್ರೂಪ್ 3,600ಕ್ಕೂ ಹೆಚ್ಚು ಶಾಖೆಗಳನ್ನು ಹೊಂದಿದ್ದು, 1.1 ಕೋಟಿ ಗ್ರಾಹಕರಿಗೆ ಸೇವೆ ನೀಡುತ್ತಿದೆ.
ಸಾವಿರಾರು ಕೋಟಿ ದಾನ ಮಾಡಿದ ದಾನಿ
ಆರ್. ತ್ಯಾಗರಾಜನ್ ಅವರ ಸರಳತೆ ಎಂಥವರನ್ನೂ ಬೆರಗುಗೊಳಿಸುತ್ತದೆ. ಸದ್ಯ ಇವರ ಕಂಪನಿಯ ಮೌಲ್ಯ ಸುಮಾರು 1.50 ಲಕ್ಷ ಕೋಟಿ ರೂಪಾಯಿಗಳಿಗೂ ಅಧಿಕವಾಗಿದ್ದರೂ, ಇವರು ಇಂದಿಗೂ ಬಳಸುತ್ತಿರುವುದು ಕೇವಲ 6 ಲಕ್ಷ ರೂಪಾಯಿ ಮೌಲ್ಯದ ಹಳೆಯ ಕಾರನ್ನು ಮಾತ್ರ. ಸ್ಮಾರ್ಟ್‌ಫೋನ್‌ಗಳು ಏಕಾಗ್ರತೆಗೆ ಭಂಗ ತರುತ್ತವೆ ಎಂಬ ಕಾರಣಕ್ಕೆ ಇವರು ಮೊಬೈಲ್ ಫೋನ್ ಬಳಸುವುದಿಲ್ಲ. ಅಚ್ಚರಿಯ ವಿಷಯವೆಂದರೆ, ಕಂಪನಿಯೊಂದರಲ್ಲಿ ತಮಗಿದ್ದ 6,210 ಕೋಟಿ ರೂಪಾಯಿ (750 ಮಿಲಿಯನ್ ಡಾಲರ್) ಮೌಲ್ಯದ ಷೇರುಗಳನ್ನು ಮಾರಾಟ ಮಾಡಿ, ಆ ಸಂಪೂರ್ಣ ಹಣವನ್ನು ಟ್ರಸ್ಟ್ ಒಂದಕ್ಕೆ ದಾನ ಮಾಡಿದ್ದಾರೆ.
ಯಶಸ್ವಿ ಉದ್ಯಮಿಯಾಗಿ ಬೆಳೆದ ಮೇಲೂ ತಮ್ಮ ಬೇರುಗಳನ್ನು ಮರೆಯದ ತ್ಯಾಗರಾಜನ್ ಅವರ ಜೀವನ ಶೈಲಿ ಇಂದಿನ ಯುವ ಪೀಳಿಗೆಗೆ ಮಾದರಿಯಾಗಿದೆ.

