ಸುಮಾರು 24 ವರ್ಷಗಳ ಹಿಂದೆ ಹರಿಯಾಣದಲ್ಲಿ ನಡೆದ ಭೀಕರ ಸಾಮೂಹಿಕ ಹತ್ಯಾಕಾಂಡವೊಂದು ಈಗ ಮತ್ತೆ ಮುನ್ನೆಲೆಗೆ ಬಂದಿದೆ. ಹರಿಯಾಣದ ಬರ್ವಾಲಾದ ಮಾಜಿ ಶಾಸಕ ರೇಲು ರಾಮ್ ಪೂನಿಯಾ ಮತ್ತು ಅವರ ಕುಟುಂಬದ ಎಂಟು ಸದಸ್ಯರನ್ನು ಕೊಂದ ಆರೋಪಿಗಳಿಗೆ ಇತ್ತೀಚೆಗೆ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಮಧ್ಯಂತರ ಜಾಮೀನು ನೀಡಿದೆ. ಸ್ವಂತ ಮಗಳು ಮತ್ತು ಅಳಿಯನೇ ಆಸ್ತಿಯಾಸೆಗಾಗಿ ಇಡೀ ಕುಟುಂಬವನ್ನೇ ನಿದ್ರೆಯಲ್ಲಿದ್ದಾಗಲೇ ಬಲಿ ಪಡೆದ ಈ ಕೃತ್ಯದ ಕರಾಳ ಇತಿಹಾಸ ಇಲ್ಲಿದೆ.
ನಡೆದಿದ್ದೇನು?
2001ರ ಆಗಸ್ಟ್ 23ರ ರಾತ್ರಿ ಹರಿಯಾಣದ ಹಿಸಾರ್ ಜಿಲ್ಲೆಯ ಲಿಟಾನಿ ಗ್ರಾಮದ ಫಾರ್ಮ್ಹೌಸ್ನಲ್ಲಿ ಈ ಘೋರ ಹತ್ಯಾಕಾಂಡ ನಡೆದಿತ್ತು. ಅಂದು ಕೇವಲ 19 ವರ್ಷದವಳಾಗಿದ್ದ ಮಗಳು ಸೋನಿಯಾ ಮತ್ತು ಆಕೆಯ ಪತಿ ಸಂಜೀವ್ ಕುಮಾರ್ ಸೇರಿ ಮಾಜಿ ಶಾಸಕ ರೇಲು ರಾಮ್ ಪೂನಿಯಾ ಸೇರಿದಂತೆ ಎಂಟು ಜನರನ್ನು ಮಲಗಿದ್ದ ಜಾಗದಲ್ಲೇ ಹೊಡೆದು ಕೊಂದಿದ್ದರು. ಈ ಪೈಕಿ ಕೇವಲ 3 ತಿಂಗಳ ಹಸುಳೆಯೂ ಸೇರಿದ್ದು ಘಟನೆಯ ತೀವ್ರತೆಗೆ ಸಾಕ್ಷಿಯಾಗಿದೆ. ತಂದೆಯ ಇಷ್ಟಕ್ಕೆ ವಿರುದ್ಧವಾಗಿ ಜೂಡೋ ಆಟಗಾರ ಸಂಜೀವ್ನನ್ನು ಮದುವೆಯಾಗಿದ್ದ ಸೋನಿಯಾ, ಆಸ್ತಿಯಲ್ಲಿ ಪಾಲು ಕೇಳಿದ್ದಳು. ಆದರೆ ತಂದೆ ಇದನ್ನು ನಿರಾಕರಿಸಿದ್ದೇ ಈ ಸಾಮೂಹಿಕ ಹತ್ಯೆಗೆ ಕಾರಣವಾಗಿತ್ತು.
ಪೂನಿಯಾ ಅವರ ಆಸ್ತಿ ಎಷ್ಟಿತ್ತು?
ರೇಲು ರಾಮ್ ಪೂನಿಯಾ ಅವರ ಬದುಕು ಅತ್ಯಂತ ಸಾಧಾರಣವಾಗಿತ್ತು. ದನ ಕಾಯುವ ಕೆಲಸ ಮಾಡುತ್ತಿದ್ದ ಅವರು ನಂತರ ದೆಹಲಿಗೆ ವಲಸೆ ಹೋದರು. ಅಲ್ಲಿ ಸೀಮೆಎಣ್ಣೆ ವ್ಯಾಪಾರದಲ್ಲಿ ತೊಡಗಿ ಅಪ್ರತಿಮ ಯಶಸ್ಸು ಕಂಡರು. ಕಠಿಣ ಪರಿಶ್ರಮದಿಂದ ಅಪಾರ ಆಸ್ತಿ ಗಳಿಸಿದ ಇವರು ಅಲ್ಪಕಾಲದಲ್ಲೇ ಕೋಟ್ಯಂತರ ರೂಪಾಯಿ ಮೌಲ್ಯದ ಆಸ್ತಿ ಒಡೆಯರಾದರು. ಹಿಸಾರ್ ಬಳಿ ಎರಡು ಎಕರೆ ವಿಸ್ತೀರ್ಣದ ಬೃಹತ್ ಬಂಗಲೆ, 100 ಎಕರೆ ಫಾರ್ಮ್ಹೌಸ್, ಫರೀದಾಬಾದ್ನಲ್ಲಿ ಬಂಗಲೆ, ದೆಹಲಿ ಮತ್ತು ನಂಗ್ಲೋಯಿಯಲ್ಲಿ ಹಲವು ಅಂಗಡಿಗಳು, ದುಬಾರಿ ಕಾರುಗಳು ಹಾಗೂ ಅಪಾರ ಪ್ರಮಾಣದ ಚಿನ್ನಾಭರಣ ಮತ್ತು ನಗದನ್ನು ಅವರು ಹೊಂದಿದ್ದರು.
ಕಾನೂನು ಹೋರಾಟ ಮತ್ತು ಜಾಮೀನು
ಈ ಪ್ರಕರಣದಲ್ಲಿ ಸೋನಿಯಾ ಮತ್ತು ಸಂಜೀವ್ ದಂಪತಿಗೆ ಕೆಳಹಂತದ ನ್ಯಾಯಾಲಯ ಮರಣದಂಡನೆ ವಿಧಿಸಿತ್ತು. ಆದರೆ ನಂತರದ ಕಾನೂನು ಪ್ರಕ್ರಿಯೆಗಳಲ್ಲಿ ಸುಪ್ರೀಂ ಕೋರ್ಟ್ ಇದನ್ನು ಜೀವಾವಧಿ ಶಿಕ್ಷೆಯನ್ನಾಗಿ ಪರಿವರ್ತಿಸಿತ್ತು. ಜೈಲು ಶಿಕ್ಷೆ ಅನುಭವಿಸುತ್ತಿದ್ದ ಈ ದಂಪತಿ ಇತ್ತೀಚೆಗೆ ಶೀಘ್ರ ಬಿಡುಗಡೆ ಕೋರಿ ಸಲ್ಲಿಸಿದ್ದ ಅರ್ಜಿಯ ಹಿನ್ನೆಲೆಯಲ್ಲಿ ಕೋರ್ಟ್ ಅವರಿಗೆ ಮಧ್ಯಂತರ ಜಾಮೀನು ನೀಡಿದೆ. ಸದ್ಯ ಸಂಜೀವ್ ಮತ್ತು ಸೋನಿಯಾ ಇಬ್ಬರೂ ಜೈಲಿನಿಂದ ಹೊರಬಂದಿದ್ದಾರೆ.

