ಈ ವರ್ಷ ಬಿಡುಗಡೆಯಾದ ಕನ್ನಡ ಚಿತ್ರಗಳ ಪೈಕಿ ಗೆಲುವಿಗಿಂತ ಸೋಲು ಕಂಡಿದ್ದೇ ಹೆಚ್ಚು. ಒಂದಷ್ಟು ಚಿತ್ರಗಳು ಒಳ್ಳೆಯ ವಿಮರ್ಶೆ ಪಡೆದುಕೊಂಡದ್ದು ಬಿಟ್ಟರೆ, ನೆಲಕಚ್ಚಿದ ಚಿತ್ರಗಳ ಸಂಖ್ಯೆಯೇ ಹೆಚ್ಚಿದೆ. ಇನ್ನು ಪರಭಾಷಾ ಚಿತ್ರಗಳ ಜತೆ ಕಾಂತಾರ ಬಿಟ್ಟರೆ ಇನ್ಯಾವ ಚಿತ್ರವೂ ಸಹ ಪೈಪೋಟಿಗೆ ಇಳಿಯಲಿಲ್ಲ. ಬೇರೆ ಇಂಡಸ್ಟ್ರಿಗಳಿಗೆ ಹೋಲಿಸಿದರೆ ಒಟಿಟಿಯಲ್ಲಿಯೂ ಸಹ ಕನ್ನಡ ಚಿತ್ರಗಳು ಹೆಚ್ಚೇನೂ ಸದ್ದು ಮಾಡಿಲ್ಲ.
ಹೀಗೆ ಬೆರಳೆಣಿಕೆಯಷ್ಟು ಮಾತ್ರ ಬಾಕ್ಸ್‌ಆಫೀಸ್ ಸಕ್ಸಸ್ ಕಂಡ ಕನ್ನಡ ಚಿತ್ರರಂಗ ಮುಂದಿನ ವರ್ಷ ಒಳ್ಳೆಯ ಚಿತ್ರಗಳನ್ನು ನೀಡಿ ಪುಟಿದೇಳಲಿ ಎಂಬುದು ಸಿನಿ ರಸಿಕರ ಆಸೆ. ಆದರೆ ಕನ್ನಡದ ಕೆಲ ಚಿತ್ರ ತಂಡಗಳು ತಾವು ಸೇಫ್ ಆಗುವುದಕ್ಕೋಸ್ಕರ ಕಂಡುಕೊಂಡಿರುವ ಹೊಸ ಮಾರ್ಗ ಪ್ರೇಕ್ಷಕನ ಹಕ್ಕನ್ನು ಕಸಿದುಕೊಂಡಿದೆ.
ಹೌದು, ಈ ತಿಂಗಳು ಬಿಡುಗಡೆಯಾದ ಕನ್ನಡದ ಯಾವ ಸ್ಟಾರ್ ನಟನ ಚಿತ್ರಕ್ಕೂ ಸಹ ಸಿನಿಮಾ ನೋಡಿದ ಪ್ರೇಕ್ಷಕನಿಗೆ ವಿಮರ್ಶೆ ಮಾಡುವ ಹಕ್ಕನ್ನು ನೀಡಲಾಗಿಲ್ಲ. ಜನಪ್ರಿಯ ಟಿಕೆಟ್ ಬುಕಿಂಗ್ ಅಪ್ಲಿಕೇಶನ್ ಬುಕ್‌ಮೈಶೋನಲ್ಲಿ ಚಿತ್ರ ನೋಡಿ ಬರುವ ಪ್ರೇಕ್ಷಕನಿಗೆ ಇದ್ದ ರೇಟಿಂಗ್ ಮಾಡುವ ಆಯ್ಕೆಯನ್ನು ಚಿತ್ರತಂಡಗಳು ಕೋರ್ಟ್ ಆರ್ಡರ್ ತರುವ ಮೂಲಕ ಕಸಿದುಕೊಂಡಿವೆ.
ದರ್ಶನ್ ಕೊಲೆ ಆರೋಪಿ ಸ್ಥಾನದಲ್ಲಿದ್ದಾರೆ ಎಂಬ ಕಾರಣಕ್ಕೆ ಡೆವಿಲ್ ಚಿತ್ರತಂಡ ಮೊದಲಿಗೆ ಈ ನಿರ್ಧಾರವನ್ನು ತೆಗೆದುಕೊಂಡಿತ್ತು. ಆದರೆ ಇದೀಗ ಮಾರ್ಕ್, ೪೫ ಚಿತ್ರಗಳೂ ಸಹ ಅದೇ ಮಾರ್ಗ ಅನುಸರಿಸಿವೆ. ಈ ಚಿತ್ರಗಳನ್ನು ನೋಡಿ ಹೊರಬಂದು ರೇಟಿಂಗ್ ನೀಡಲು ಹೋದವರಿಗೂ ಸಹ ಕೋರ್ಟ್ ಆರ್ಡರ್ ಸಲುವಾಗಿ ರೇಟಿಂಗ್ ಮಾಡಲು ಅನುಮತಿಯಿಲ್ಲ ಎಂದು ಪ್ರಕಟಿಸಲಾಗಿದೆ.
ಹೀಗೆ ಸಿಕ್ಕ ಸಿಕ್ಕ ಚಿತ್ರಗಳಿಗೆಲ್ಲ ಕೋರ್ಟ್ ಆರ್ಡರ್ ತಂದು ರೇಟಿಂಗ್ ಮೇಲೆ ನಿಷಿದ್ಧ ಹೇರಿದರೆ ಚಿತ್ರ ಹೇಗಿದೆ ಎಂಬುದನ್ನು ನಿರ್ಧರಿಸುವ ಹಕ್ಕು ಪ್ರೇಕ್ಷಕನಿಗೆ ಉಳಿಯುವುದೇ ಇಲ್ಲ. ‘ದುಡ್ಡು ಕೊಟ್ಟು ಸಿನಿಮಾ ನೋಡುವ ಪ್ರೇಕ್ಷಕನಿಗೆ ಟೀಕಿಸುವ ಹಕ್ಕಿದೆ’ ಎಂಬ ಮಾತನ್ನು ನಿನ್ನಿಂದಲೇ ಚಿತ್ರಕ್ಕೆ ವ್ಯಾಪಕ ಟೀಕೆ ಎದುರಾದಾಗ ಪುನೀತ್ ರಾಜ್‌ಕುಮಾರ್ ಹೇಳಿದ್ದನ್ನು ಈ ಕ್ಷಣದಲ್ಲಿ ನೆನೆಯಬೇಕಿದೆ.
ಒಳ್ಳೆಯ ಚಿತ್ರವನ್ನು ಮಾಡಿದರೆ ಯಾರು ಎಷ್ಟೇ ಕುತಂತ್ರ ಹೆಣೆದರೂ, ಎಷ್ಟೆ ಅಪಪ್ರಚಾರ ಮಾಡಿದರೂ ಅದನ್ನು ಸೋಲಿಸಲಾಗುವುದಿಲ್ಲ. ಹಾಗೆಯೇ ಒಬ್ಬ ನಟನ ಚಿತ್ರವನ್ನು ವಿರೋಧಿಗಳ ಗುಂಪು ಕೆಟ್ಟ ರೇಟಿಂಗ್ ಕೊಡಬೇಕು ಎಂದು ನಿರ್ಧರಿಸಿದರೆ ಆ ಇಡೀ ಬಣ ಪ್ರತ್ಯೇಕವಾಗಿ ಟಿಕೆಟ್ ಬುಕ್ ಮಾಡಬೇಕು, ಚಿತ್ರವನ್ನು ನೋಡಬೇಕು ಬಳಿಕವಷ್ಟೇ ರೇಟಿಂಗ್ ನೀಡಲು ಸಾಧ್ಯ. ಹೌದು, ಬುಕ್ ಮೈ ಶೋನಲ್ಲಿ ಟಿಕೆಟ್ ಬುಕ್ ಮಾಡಿದವರಿಗೆ ಮಾತ್ರ ಚಿತ್ರಕ್ಕೆ ರೇಟಿಂಗ್ ನೀಡಲು ಸಾಧ್ಯವಿತ್ತೇ ಹೊರತು ಎಲ್ಲರಿಗೂ ಈ ಅವಕಾಶ ಇರಲಿಲ್ಲ.
ಹೀಗಿದ್ದಾಗ ಚಿತ್ರಕ್ಕೆ ನೆಗೆಟಿವ್ ರೇಟಿಂಗ್ ಕೊಡಬೇಕು ಎಂದುಕೊಳ್ಳುವ ಗುಂಪು ದುಬಾರಿ ಖರ್ಚು ಮಾಡಿ ಟಿಕೆಟ್ ಬುಕ್ ಮಾಡಿ, ಸಮಯ ನೀಡಿ ಚಿತ್ರ ನೋಡುತ್ತಾರೆ ಎಂದರೆ ಅದು ನಂಬುವ ಮಾತೇ? ಯಾರೋ ಒಂದಿಬ್ಬರು ಅಷ್ಟು ಕೆಲಸವಿಲ್ಲದೇ ಕುಳಿತಿದ್ದಾರೆ ಎಂದುಕೊಂಡರೂ ಸಾವಿರಾರು ಒಳ್ಳೆಯ ರೇಟಿಂಗ್ ಕೆಡವಬೇಕೆಂದರೆ ಸಾವಿರಾರು ಮಂದಿ ಸಿನಿಮಾ ವೀಕ್ಷಿಸಬೇಕು. ಹೀಗೆ ಸಾವಿರಾರು ಮಂದಿ ದೊಡ್ಡ ಮಟ್ಟದಲ್ಲಿ ಚಿತ್ರ ವೀಕ್ಷಿಸಿ ತಾವು ದ್ವೇಷಿಸುವ ನಟನ ಚಿತ್ರಕ್ಕೆ ಬಿಟ್ಟಿ ಕಲೆಕ್ಷನ್ ಕೊಡುತ್ತಾರೆಯೇ? ಹೀಗಿರುವಾಗ ಸುಖಾಸುಮ್ಮನೆ ಸಿಕ್ಕ ಸಿಕ್ಕ ಚಿತ್ರಗಳ ಮೇಲೆ ಏಕೆ ಈ ಕ್ರಮ?
ಒಟ್ಟಿನಲ್ಲಿ ಎಲ್ಲ ಚಿತ್ರಗಳು ಈ ನಡೆಯನ್ನು ಅನುಸರಿಸಿದರೆ ದುಡ್ಡು ಕೊಟ್ಟು ಸಿನಿಮಾ ನೋಡಿ ಅದನ್ನು ಹೇಗಿದೆ ಎಂದು ವ್ಯಕ್ತಪಡಿಸುವ ಸ್ವಾತಂತ್ರ್ಯಕ್ಕೆ ಅಡ್ಡಿಯನ್ನುಂಟುಮಾಡಿದರೆ ಅನೇಕ ಪ್ರೇಕ್ಷಕರು ಚಿತ್ರಮಂದಿರದ ಕಡೆ ಬರುವ ಉತ್ಸಾಹ ಕಳೆದುಕೊಳ್ಳುವುದುಂಟು. ಅಲ್ಲದೇ ಇದು ಕೆಟ್ಟ ಚಿತ್ರ ಮಾಡುವ ನಿರ್ಮಾಪಕ ಹಾಗೂ ನಿರ್ದೇಶಕರ ಪಾಲಿಗೆ ಅಸ್ತ್ರವಾಗಲಿದ್ದು, ಅವರೂ ಸಹ ಕೋರ್ಟ್ ಆದೇಶ ತಂದು ರೇಟಿಂಗ್ ಮೇಲೆ ನಿಷೇಧ ಹೇರಿ ತನಗೆ ಅನುಕೂಲವಾಗುವಂತೆ ಚಿತ್ರ ಬಿಡುಗಡೆ ಮಾಡುವ ಸಾಧ್ಯತೆಗಳಿವೆ.
ರೇಟಿಂಗ್ ಪ್ರೇಕ್ಷಕ ಮಹಾಪ್ರಭು ನೀಡುವ ಮಾರ್ಕ್ಸ್ ಶೀಟ್
ಇನ್ನು ರೇಟಿಂಗ್ ಹಾಗೂ ರಿವ್ಯೂ ಎಷ್ಟು ಮಹತ್ವವಾದದ್ದು ಎಂಬುದು ಓರ್ವ ಸಿನಿ ರಸಿಕನಿಗೆ ಮಾತ್ರ ಗೊತ್ತು. ತಾನೊಂದು ಸಿನಿಮಾಗೆ ಹೋಗಬೇಕೆಂದುಕೊಂಡರೆ ಆ ಚಿತ್ರ ಹೇಗಿದೆ ಎಂಬುದನ್ನು ಇದೇ ರೇಟಿಂಗ್ ಹಾಗೂ ರಿವ್ಯೂ ನೋಡಿಯೇ ತಿಳಿದುಕೊಳ್ಳುತ್ತಾನೆ. ಹೀಗೆ ವಿದ್ಯಾರ್ಥಿಗಳಿಗೆ ಅಂಕಪಟ್ಟಿ ಹೇಗೋ ಚಿತ್ರಕ್ಕೆ ರೇಟಿಂಗ್ ಹಾಗೆ. ಹೀಗೆ ಮಹತ್ವವಾಗಿರುವ ರೇಟಿಂಗ್ ಅನ್ನೇ ನಿಷೇಧ ಮಾಡಲು ಹೊರಟಿರುವ ಚಿತ್ರರಂಗದ ಮಂದಿ ವಿರುದ್ಧ ಈಗಾಗಲೇ ಕೆಲವರು ಸಾಮಾಜಿಕ ಜಾಲತಾಣದಲ್ಲಿ ಟೀಕೆ ಮಾಡಲಾರಂಭಿಸಿದ್ದಾರೆ.

