2025ನೇ ವರ್ಷಕ್ಕೆ ವಿದಾಯ ಹೇಳುವ ಕಾಲ ಬಂದಿದೆ. 2026ರ ಸ್ವಾಗತಿಸಲು ಕೆಲವೇ ದಿನಗಳು ಬಾಕಿ ಇದೆ. ವರ್ಷದ ಹಿನ್ನೋಟ ನೋಡಿದರೆ ಕರ್ನಾಟಕದಲ್ಲಿ ವಿವಿಧ ಕ್ಷೇತ್ರದ ಗಣ್ಯರು ಈ ವರ್ಷ ನಮ್ಮನ್ನು ಅಗಲಿದ್ದಾರೆ.
ಸಾಹಿತಿ ಎಸ್.ಎಲ್.ಭೈರಪ್ಪ, ಶಾಸಕ ಶಾಮನೂರು ಶಿವಶಂಕರಪ್ಪ, ಎಚ್.ವೈ.ಮೇಟಿ, ಸಾಲು ಮರದ ತಿಮ್ಮಕ್ಕ, ಹಾಸ್ಯ ಕಲಾವಿದ ಉಮೇಶ್ ಸೇರಿದಂತೆ ಹಲವರು ಅಗಲಿದ್ದು, ಅವರ ನೆನಪನ್ನು ಬಿಟ್ಟು ಹೋಗಿದ್ದಾರೆ.
ಶಾಮನೂರು ಶಿವಶಂಕರಪ್ಪ: ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ, ಮಾಜಿ ಸಚಿವ ಶಾಮನೂರು ಶಿವಶಂಕರಪ್ಪ ಡಿಸೆಂಬರ್ 14ರಂದು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ವಿಧಿವಶರಾದರು. 94 ವರ್ಷದ ಅವರು ದಾವಣಗೆರೆ ದಕ್ಷಿಣ ಕ್ಷೇತ್ರದ ಶಾಸಕರಾಗಿದ್ದರು.
ದಾವಣಗೆರೆ ಧಣಿ ಎಂದೇ ಖ್ಯಾತಿ ಪಡೆದಿದ್ದ ಶಾಮನೂರು ಶಿವಶಂಕರಪ್ಪ ಅಖಿಲ ಭಾರತ ವೀರಶೈವ ಮಹಾಸಭೆಯ ರಾಷ್ಟ್ರೀಯ ಅಧ್ಯಕ್ಷರಾಗಿದ್ದರು. ಉದ್ಯಮ, ಶಿಕ್ಷಣ ಕ್ಷೇತ್ರದಲ್ಲಿ ಶಾಮನೂರು ಶಿವಶಂಕರಪ್ಪ ತಮ್ಮ ಹೆಜ್ಜೆ ಗುರುತು ಉಳಿಸಿ ಹೋಗಿದ್ದಾರೆ.
ಕರ್ನಾಟಕ ರಾಜಕೀಯದಲ್ಲಿ ಸಕ್ರಿಯಾಗಿದ್ದ ಶಾಮನೂರು ಶಿವಶಂಕರಪ್ಪ 6 ಬಾರಿ ಶಾಸಕರಾಗಿ, ಒಂದು ಬಾರಿ ಸಂಸದರಾಗಿ ಆಯ್ಕೆಯಾಗಿದ್ದರು. ಅವರ ಪುತ್ರ ಎಸ್.ಎಸ್.ಮಲ್ಲಿಕಾರ್ಜುನ್ ಈಗ ಸಿಎಂ ಸಿದ್ದರಾಮಯ್ಯ ಸಂಪುಟದಲ್ಲಿ ಸಚಿವರು, ಸೊಸೆ ಡಾ.ಪ್ರಭಾ ಮಲ್ಲಿಕಾರ್ಜುನ್ ದಾವಣಗೆರೆ ಸಂಸದರು.
1969ರಲ್ಲಿ ದಾವಣಗೆರೆ ಪುರಸಭೆ ಸದಸ್ಯರಾಗಿ ನಂತರ ನಗರಸಭೆ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು ಶಾಮನೂರು ಶಿವಶಂಕರಪ್ಪ. ದಾವಣಗೆರೆಯಲ್ಲಿ ಬಾಪೂಜಿ ವಿದ್ಯಾ ಕೇಂದ್ರದ ಮೂಲಕ ಇಂಜಿನಿಯರಿಂಗ್, ವೈದ್ಯಕೀಯ ಕಾಲೇಜುಗಳು ಸೇರಿದಂತೆ ಅನೇಕ ಸಂಸ್ಥೆಗಳನ್ನು ಕಟ್ಟಿ ಜಿಲ್ಲೆಯನ್ನು ವಿದ್ಯಾಕಾಶಿಯಾಗಿಸಿದ್ದರು.
ಜವಳಿ ಕ್ಷೇತ್ರದ ಅವನತಿ ಪ್ರಾರಂಭವಾದಾಗ ದಾವಣಗೆರೆಗೆ ಒಂದು ಬ್ರಾಂಡ್ ಹೆಸರನ್ನು ಶಿವಶಂಕರಪ್ಪ ಅವರು ತಂದುಕೊಟ್ಟರು. ದೀರ್ಘಕಾಲ ಎಐಸಿಸಿ ಖಜಾಂಚಿ ಆಗಿದ್ದರು. ಎಲ್ಲರೊಂದಿಗೂ ಸ್ನೇಹ ಸಂಪಾದಿಸಿದ್ದವರು, ಅಜಾತಶತ್ರು ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು.
ಶಾಮನೂರು ಶಿವಶಂಕರಪ್ಪ ಕಷ್ಟದ ಸಂದರ್ಭಗಳಲ್ಲಿ ಜನರಿಗೆ ಸಹಾಯಹಸ್ತ ಚಾಚುತ್ತಿದ್ದರು. ಕೋವಿಡ್ ಸಂದರ್ಭದಲ್ಲಿ ಆರು ಕೋಟಿಗೂ ಹೆಚ್ಚು ವೆಚ್ಚ ಮಾಡಿ ಆಕ್ಸಿಜನ್ ಸರಬರಾಜು ಮಾಡಿದ್ದರು.
ಸಾಲುಮರದ ತಿಮ್ಮಕ್ಕ: ನವೆಂಬರ್ 14ರಂದು ವೃಕ್ಷ ಮಾತೆ ಎಂದೇ ಖ್ಯಾತಿ ಪಡೆದಿದ್ದ ಸಾಲುಮರದ ತಿಮ್ಮಕ್ಕ ನಮ್ಮನ್ನು ಅಗಲಿದರು. 114 ವರ್ಷಗಳ ಕಾಲ ಸಾರ್ಥಕ ಬದುಕು ನಡೆಸಿದ್ದ ತಿಮ್ಮಕ್ಕ ಮುಂದಿನ ಪೀಳಿಗೆಗೆ ಸಹ ಮರಗಳನ್ನು ಉಳಿಸಿ ಎಂಬ ಸಂದೇಶವನ್ನು ನೀಡಿದ್ದಾರೆ.
ಗಿಡ ನೆಟ್ಟು ಅದನ್ನು ಮಕ್ಕಳಂತೆ ಪೋಷಿಸಿದ ಸಾಲು ಮರದ ತಿಮ್ಮಕ್ಕ 2019ರಲ್ಲಿ ಭಾರತ ಸರ್ಕಾರ ನೀಡುವ ಅತ್ಯುನ್ನತ ಪದ್ಮಶ್ರೀ ಪ್ರಶಸ್ತಿಯನ್ನು ಪಡೆದಿದ್ದರು. ರಾಜ್ಯ ರಾಷ್ಟ್ರ ಮಟ್ಟದಲ್ಲಿ ಹಲವು ಪ್ರಶಸ್ತಿ ಪಡೆದಿದ್ದ ಸಾಲುಮರದ ತಿಮ್ಮಕ್ಕ ಹಾಕಿಕೊಟ್ಟ ಹಾದಿಯಲ್ಲಿ ಎಲ್ಲರೂ ನಡೆಯಬೇಕಿದೆ.
ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನಲ್ಲಿ ಜನಿಸಿದ್ದ ಸಾಲುಮರದ ತಿಮ್ಮಕ್ಕ ಮಕ್ಕಳಿಲ್ಲದ ಮರಗಿಡಗಳನ್ನೇ ತಮ್ಮ ಮಕ್ಕಳಂತೆ ಸಾಕುತ್ತಿದ್ದರು. ಅವರು ನೆಟ್ಟಿರುವ ಮರಗಳು ಇವತ್ತು ಹೆಮ್ಮರವಾಗಿ ಬೆಳೆದು ನಿಂತು ಜನರಿಗೆ ನೆರಳು ನೀಡುತ್ತಿವೆ. ಸುಮಾರು 4,000 ಕ್ಕೂ ಹೆಚ್ಚು ಮರಗಳನ್ನು ಬೆಳೆಸುವ ಮೂಲಕ ತಿಮ್ಮಕ್ಕ ಸಾಲುಮರದ ತಿಮ್ಮಕ್ಕ ಎಂದೇ ಹೆಸರುವಾಸಿಯಾಗಿದ್ದರು.
ಪರಿಸರವಾದಿಯಾಗಿದ್ದ ತಿಮ್ಮಕ್ಕನವರ ಸೇವೆಯನ್ನು ಪರಿಗಣಿಸಿ ಕೇಂದ್ರ ಸರ್ಕಾರ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿತ್ತು. ಬೇಲೂರಿನಲ್ಲಿ ತಿಮ್ಮಕ್ಕ ವಸ್ತು ಸಂಗ್ರಹಾಲಯವನ್ನು ಮಾಡಬೇಕು ಎಂಬುದು ಅವರ ಕೊನೆಯ ಆಸೆ ಆಗಿತ್ತು. ಅದನ್ನು ಸರ್ಕಾರ ಪರಿಶೀಲಿಸುತ್ತಿದೆ.
ಪರಿಸರದ ಬಗೆಗಿನ ಇವರ ಅತೀವ ಕಾಳಜಿಯನ್ನು ಪರಿಗಣಿಸಿ ಸರ್ಕಾರವು ಇವರಿಗೆ ಸಂಪುಟ ದರ್ಜೆ ಸ್ಥಾನಮಾನ ನೀಡಿ ಪರಿಸರ ರಾಯಭಾರಿಯನ್ನಾಗಿ ನೇಮಿಸಿತ್ತು. ಅರಣ್ಯ ಇಲಾಖೆಯ ವತಿಯಿಂದ ಪರಿಸರವಾದಿಗಳಿಗೆ ಪ್ರತಿವರ್ಷ ತಿಮ್ಮಕ್ಕನವರ ಹೆಸರಿನಲ್ಲಿ ಪ್ರಶಸ್ತಿಯನ್ನು ಕೊಡುವ ಬಗ್ಗೆ ಈಗಾಗಲೇ ಘೋಷಣೆ ಮಾಡಲಾಗಿದೆ.
ಎಚ್.ವೈ.ಮೇಟಿ: ಬಾಗಲಕೋಟೆ ಕ್ಷೇತ್ರದ ಕಾಂಗ್ರೆಸ್ ಶಾಸಕ, ಮಾಜಿ ಸಚಿವ ಎಚ್.ವೈ.ಮೇಟಿ (80) ನವೆಂಬರ್ 4ರಂದು ವಿಧಿವಶರಾದರು. ಶ್ವಾಸಕೋಶದ ಸೋಂಕಿನಿಂದ ಬಳಲುತ್ತಿದ್ದ ಮೇಟಿ ಅವರು ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಪರಮಾಪ್ತ ನಾಯಕರಾಗಿದ್ದ ಎಚ್.ವೈ.ಮೇಟಿ ಸಿದ್ದರಾಮಯ್ಯ ಮೊದಲ ಬಾರಿಗೆ 2013ರಲ್ಲಿ ಮುಖ್ಯಮಂತ್ರಿಯಾಗಿದ್ದಾಗ ಅವರ ಸಂಪುಟದಲ್ಲಿ ಸಚಿವರಾಗಿ ಕೆಲಸ ಮಾಡಿದ್ದರು.
ಹೆಚ್.ವೈ.ಮೇಟಿ ದೀರ್ಘ ಕಾಲ ಜನಪರವಾಗಿ, ಕ್ಷೇತ್ರದ ಅಭಿವೃದ್ಧಿಯ ಬಗ್ಗೆಯಷ್ಟೇ ಚಿಂತಿಸುತ್ತಿದ್ದ ಮುತ್ಸದ್ದಿ ನಾಯಕ. ವೃತ್ತಿಯಲ್ಲಿ ಕೃಷಿಕರಾಗಿದ್ದ ಮೇಟಿಯವರು ಬಿಲ್‌ಕೆರೂರು ಮಂಡಳ ಪಂಚಾಯಿತಿ ಅಧ್ಯಕ್ಷರಾಗುವ ಮೂಲಕ ರಾಜಕೀಯ ಪ್ರವೇಶಿಸಿದ್ದರು.
ಬಾಗಲಕೋಟೆ ತಾಲ್ಲೂಕು ಕೃಷಿ ಹುಟ್ಟುವಳಿ ಮಾರಾಟ ಸಮಿತಿ, ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಧಿಕಾರ, ಮತ್ತು ಎಂ.ಎಸ್.ಐ.ಎಲ್.ನ ಅಧ್ಯಕ್ಷರಾಗಿ ಡಿ.ಸಿ.ಸಿ ಬ್ಯಾಂಕ್ ಹಾಗೂ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದರು.
ಶಾಸಕರಾಗಿ, ಸಂಸದರಾಗಿ, ಸಚಿವರಾಗಿ, ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ಮೇಟಿಯವರು, ಸಜ್ಜನ ರಾಜಕಾರಣಿ. ರಾಜಕೀಯ ತತ್ವಗಳನ್ನು ತಪ್ಪದೇ ಪಾಲಿಸುತ್ತಿದ್ದ ಅವರು ಜನರೊಂದಿಗೆ ಬೆರೆಯುವ ಗುಣವಿದ್ದು, ಜಾತ್ಯಾತೀತ ತತ್ವದ ಪಾಲಕರಾಗಿದ್ದರು.
ಎಸ್.ಎಲ್.ಭೈರಪ್ಪ: ಕನ್ನಡ ನಾಡಿನ ಹಿರಿಯ ಸಾಹಿತಿ ಎಸ್.ಎಲ್.ಭೈರಪ್ಪ ಸೆಪ್ಟೆಂಬರ್ 24ರಂದು ಸಾವನ್ನಪ್ಪಿದರು. 94 ವರ್ಷದ ಭೈರಪ್ಪ ಕನ್ನಡ ನಾಡಿಗೆ ನೀಡಿರುವ ಕೊಡುಗೆ ಅಪಾರ. ಅವರ ಸಾಹಿತ್ಯ ಕೃಷಿ ಬೇರೆ ಭಾಷೆಗೆ ಸಹ ಭಾಷಾಂತರವಾಗಿದ್ದು, ಕನ್ನಡದ ಹಿರಿಮೆಗೆ ಕಾರಣವಾಗಿತ್ತು. ವಂಶವೃಕ್ಷ, ಆವರಣ, ದಾಟು ಸೇರಿದಂತೆ ಎಸ್.ಎಲ್.ಭೈರಪ್ಪ ಅವರ ಕೃತಿಗಳನ್ನು ಕನ್ನಡಿಗರು ಸದಾ ನೆನಪಿನಲ್ಲಿ ಇಟ್ಟುಕೊಳ್ಳಬೇಕು.
ಹಾಸನ ಜಿಲ್ಲೆ ಸಂತೆಶಿವರ ಗ್ರಾಮದಲ್ಲಿ ಜನಿಸಿದ್ದ ಭೈರಪ್ಪ ಅವರು ಹುಬ್ಬಳ್ಳಿಯ ಶ್ರೀ ಕಾಡಸಿದ್ಧೇಶ್ವರ ಕಾಲೇಜು, ಗುಜರಾತ್‌ನ ಸರ್ದಾರ್ ಪಟೇಲ್ ವಿಶ್ವವಿದ್ಯಾಲಯ, ದೆಹಲಿಯ ಎನ್‌ಸಿಇಆರ್‌ಟಿ ಮತ್ತು ಮೈಸೂರಿನ ಪ್ರಾದೇಶಿಕ ಶಿಕ್ಷಣ ಕಾಲೇಜಿನಲ್ಲಿ ತರ್ಕ ಮತ್ತು ಮನೋವಿಜ್ಞಾನದ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ್ದರು.
ಇಂಗ್ಲೀಷ್‌ನಲ್ಲಿ ರಚಿಸಿದ “ಸತ್ಯ ಮತ್ತು ಸೌಂದರ್ಯ” ಎಂಬ ಮಹಾ ಪ್ರಬಂಧಕ್ಕೆ ಬರೋಡಾದ ಮಹಾರಾಜ ಸಯ್ಯಾಜಿರಾವ್ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪದವಿ ಗಳಿಸಿದ್ದರು. ಹುಬ್ಬಳ್ಳಿ, ಗುಜರಾತ್, ದೆಹಲಿಯಲ್ಲಿ ಉಪನ್ಯಾಸಕ ವೃತ್ತಿ ಕೈಗೊಂಡಿದ್ದ ಭೈರಪ್ಪ ನಾಲ್ಕು ದಶಕಗಳಲ್ಲಿ 25 ಕಾದಂಬರಿಗಳನ್ನು ಬರೆದಿದ್ದಾರೆ.
1999ರಲ್ಲಿ ಕನಕಪುರದಲ್ಲಿ ನಡೆದ 67ನೇ ಅಖಿಲ ಕರ್ನಾಟಕ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು. ವಂಶವೃಕ್ಷಕ್ಕೆ 1966ರಲ್ಲಿ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, 1975ರಲ್ಲಿ ದಾಟು ಕಾದಂಬರಿಗೆ ರಾಜ್ಯ ಹಾಗೂ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರೆತಿದೆ.
ಭೈರಪ್ಪನವರು ರಚಿಸಿದ ಕಾದಂಬರಿಗಳಲ್ಲಿಯೇ ‘ಪರ್ವ’ ಅತ್ಯಂತ ಜನಪ್ರಿಯ. ಪದ್ಮಶ್ರೀ, ಪದ್ಮಭೂಷಣ, ಸರಸ್ವತಿ ಸಮ್ಮಾನ್, ಕನ್ನಡ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಪಂಪ ಪ್ರಶಸ್ತಿ, ಎನ್.ಟಿ.ಆರ್ ರಾಷ್ಟ್ರೀಯ ಪ್ರಶಸ್ತಿ, ಡಾ.ಬೆಟಗೇರಿ ಕೃಷ್ಣಶರ್ಮ ಪ್ರಶಸ್ತಿ ಸೇರಿದಂತೆ ಹತ್ತು ಹಲವಾರು ಪ್ರಶಸ್ತಿಗಳಿಗೆ ಭಾಜನರಾಗಿದ್ದರು.
ಎಂ.ಎಸ್.ಉಮೇಶ್: ಮೈಸೂರು ಶ್ರೀಕಂಠಯ್ಯ ಉಮೇಶ್ ಎಂ.ಎಸ್. ಉಮೇಶ್ ಎಂದೇ ಖ್ಯಾತರಾಗಿದ್ದ ಕನ್ನಡದ ಹಾಸ್ಯ ನಟ. ನವೆಂಬರ್ 30ರಂದು ಉಮೇಶ್ ನಮ್ಮನ್ನು ಅಗಲಿದರು. 350 ಸಿನಿಮಾಗಳಲ್ಲಿ ಅಭಿನಯಿಸಿದ್ದ ಉಮೇಶ್ ತಮ್ಮ ಹಾಸ್ಯದ ಮೂಲಕ ಕನ್ನಡಿಗರನ್ನು ನಗಿಸಿದ್ದರು. ಅವರ ವಿವಿಧ ಪಾತ್ರಗಳನ್ನು ಎಂದಿಗೂ ಸಹ ಕನ್ನಡಿಗರು ಮರೆಯುವಂತಿಲ್ಲ.
ವೃತ್ತಿ ರಂಗಭೂಮಿ ಮತ್ತು ಚಲನಚಿತ್ರರಂಗದ ಹಾಸ್ಯ ಕಲಾವಿದರಾಗಿದ್ದ ಎಂ.ಎಸ್. ಉಮೇಶ್ ತಮ್ಮ ವಿಶಿಷ್ಟ ಸಂಭಾಷಣೆ, ಅಭಿನಯದಿಂದ ಕನ್ನಡ ಚಿತ್ರರಸಿಕರ ಮನ ಗೆದ್ದವರು. ಬಾಲ್ಯದಿಂದಲೇ ರಂಗಭೂಮಿಯ ನಂಟು ಹೊಂದಿದ್ದ ಅವರು ಕೆ. ಹಿರಣ್ಣಯ್ಯ ಮಿತ್ರ ಮಂಡಳಿಯಲ್ಲಿ ಅ.ನ.ಕೃ. ರವರ ‘ಜಗಜ್ಯೋತಿ ಬಸವೇಶ್ವರ’ ನಾಟಕದಲ್ಲಿ ಬಿಜ್ಜಳನ ಮಗನ ಪಾತ್ರದಲ್ಲಿ ಅಭಿನಯಿಸಿ ಎಲ್ಲರ ಗಮನ ಸೆಳೆದಿದ್ದರು.
ಗುಬ್ಬಿ ವೀರಣ್ಣ, ಕೆ.ಹಿರಣ್ಣಯ್ಯ, ಎಂ.ಸಿ.ಮಹಾದೇವಸ್ವಾಮಿಯಂತಹ ರಂಗ ದಿಗ್ಗಜರ ಗರಡಿಯಲ್ಲಿ ಬೆಳೆದ ಉಮೇಶ್ ಹಲವು ದಶಕಗಳ ಕಾಲ ಕನ್ನಡ ಸಾಂಸ್ಕೃತಿಕ ಲೋಕಕ್ಕೆ ಸೇವೆ ಸಲ್ಲಿಸಿದ್ದರು. ಕಥಾ ಸಂಗಮ, ತಪ್ಪಿದ ತಾಳ, ಅನುಪಮ, ಕಾಮನ ಬಿಲ್ಲು, ಶೃತಿ ಸೇರಿದಾಗ, ಗಜಪತಿ ಗರ್ವಭಂಗ, ಗುರು ಶಿಷ್ಯರು ಸೇರಿದಂತೆ ಹಲವು ಸಿನಿಮಾಗಳಲ್ಲಿ ಅಭಿನಯಿಸಿದ್ದರು. ಬಹುಮುಖ ಪ್ರತಿಭೆಯಾಗಿದ್ದ ಇವರು ನಟನೆಯ ಜೊತೆಗೆ ಪಿಯಾನೋ ವಾದಕರಾಗಿ, ಕುಂಚ ಕಲಾವಿದರಾಗಿ, ಹಾಡುಗಾರರಾಗಿಯೂ ಖ್ಯಾತಿ ಗಳಿಸಿದ್ದರು.
ಉಳಿದಂತೆ ಚಿಕ್ಕಪೇಟೆ ಕ್ಷೇತ್ರದ ಮಾಜಿ ಶಾಸಕ ಆರ್.ವಿ.ದೇವರಾಜ್ ಈ ವರ್ಷ ನಿಧನ ಹೊಂದಿದರು. ಹಿರಿಯೂರು ಕ್ಷೇತ್ರದ ಮಾಜಿ ಶಾಸಕ ಆರ್. ರಾಮಯ್ಯ (79) ಆಗಸ್ಟ್ 20ರಂದು ವಿಧಿವಶರಾದರು. ನಿಪ್ಪಾಣಿ ಕ್ಷೇತ್ರದ ಕಾಂಗ್ರೆಸ್ ನಾಯಕ, ಮಾಜಿ ಶಾಸಕ ಕಾಕಾ ಸಾಹೇಬ್ ಪಾಟೀಲ್ ಜೂನ್ 18ರಂದು ನಿಧನ ಹೊಂದಿದರು.

