2025ನೇ ವರ್ಷ ಮುಗಿಯಲು ದಿನಗಣನೆ ಆರಂಭವಾಗಿದೆ. 2026ನೇ ವರ್ಷದಲ್ಲಿ ಕೇಂದ್ರ ಸರ್ಕಾರಿ ನೌಕರರ ವೇತನ ಹೆಚ್ಚಳವಾಗುವ ನಿರೀಕ್ಷೆ ಇದೆ. ವೇತನ ಎಷ್ಟು ಏರಿಕೆಯಾಗಲಿದೆ? ಎಂದು ನೌಕರರು ಲೆಕ್ಕಾಚಾರವನ್ನು ಹಾಕುತ್ತಿದ್ದಾರೆ.
ಸದ್ಯ ಕೇಂದ್ರ ಸರ್ಕಾರಿ ನೌಕರರು 7ನೇ ಕೇಂದ್ರ ವೇತನ ಆಯೋಗದ ವರದಿಯ ಶಿಫಾರಸಿನ ಅನ್ವಯ ವೇತನವನ್ನು ಪಡೆಯುತ್ತಿದ್ದಾರೆ. ಈ ಆಯೋಗದ ಅವಧಿ ಡಿಸೆಂಬರ್ 31ರಂದು ಮುಕ್ತಾಯಗೊಳ್ಳಲಿದೆ.
2025ರ ನವೆಂಬರ್‌ನಲ್ಲಿಯೇ ಕೇಂದ್ರ ಸರ್ಕಾರ 8ನೇ ವೇತನ ಆಯೋಗ ರಚನೆ ಕುರಿತು ಅಧಿಕೃತ ಅಧಿಸೂಚನೆ ಹೊರಡಿಸಿದೆ. ಈಗ ಆಯೋಗ ಎಷ್ಟು ವೇತನ ಏರಿಕೆಗೆ ಶಿಫಾರಸು ಮಾಡಲಿದೆ. 2.15ರ ಫಿಟ್ಮೆಂಟ್ ಅಂಶ ಸೇರಿ ನೌಕರರ ವೇತನ ಎಷ್ಟು ಏರಿಕೆ? ಎಂಬುದು ಸದ್ಯದ ಕುತೂಹಲವಾಗಿದೆ.
ವೇತನ ಏರಿಕೆ ಯಾವಾಗ?: ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರು 8ನೇ ವೇತನ ಆಯೋಗದ ಶಿಫಾರಸು ಮತ್ತು ಆ ಶಿಫಾರಸು ಯಾವಾಗಿನಿಂದ ಜಾರಿಗೆ ಬರಲಿದೆ ಎಂದು ಕಾಯುತ್ತಿದ್ದಾರೆ. 8ನೇ ವೇತನ ಆಯೋಗಕ್ಕೆ ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಮೂರ್ತಿ ರಂಜನಾ ಪ್ರಕಾಶ್ ದೇಸಾಯಿ ಅವರನ್ನು ನೇಮಕ ಮಾಡಲಾಗಿದೆ.
ಅಧಿಸೂಚನೆಯಲ್ಲಿ ಕೇಂದ್ರ ಸರ್ಕಾರ 18 ತಿಂಗಳಿನಲ್ಲಿ ಆಯೋಗ ವರದಿ ನೀಡಬೇಕು ಎಂದು ಹೇಳಿದೆ. 2027ರ ಜೂನ್ ಅಥವ ಜುಲೈ ತಿಂಗಳಿನಲ್ಲಿ ಆಯೋಗ ವರದಿಯನ್ನು ಸರ್ಕಾರಕ್ಕೆ ನೀಡುವ ಸಾಧ್ಯತೆ ಇದೆ. ವರದಿಯನ್ನು ತಕ್ಷಣ ಜಾರಿಗೊಳಿಸಲು ಫೆಬ್ರವರಿಯಲ್ಲಿ ಮಂಡಿಸುವ 2026-27ನೇ ಸಾಲಿನ ಬಜೆಟ್‌ನಲ್ಲಿ ಅನುದಾನ ಮೀಸಲಿಡಲಾಗುತ್ತದೆಯೇ? ಎಂಬುದು ಪ್ರಶ್ನೆಯಾಗಿದೆ.
ಸದ್ಯದ ಮಾಹಿತಿ ಪ್ರಕಾರ ಕೇಂದ್ರ ಸರ್ಕಾರಿ ನೌಕರರ ವೇತನ ಶೇ 20 ರಿಂದ 35ರಷ್ಟು ಹೆಚ್ಚಳವಾಗಬಹುದು. ಸುಮಾರು 50 ಲಕ್ಷ ಕೇಂದ್ರ ಸರ್ಕಾರಿ ನೌಕರರು, 69 ಲಕ್ಷ ಪಿಂಚಣಿದಾರರು ವೇತನ ಆಯೋಗದ ಶಿಫಾರಸು ಅನ್ವಯ ಲಾಭವನ್ನು ಪಡೆಯಲಿದ್ದಾರೆ.
7ನೇ ವೇತನ ಆಯೋಗ 2.57ರಷ್ಟು ಏಕರೂಪದ ಫಿಟ್ಮೆಂಟ್ ನೀಡಿತ್ತು. ಈ ಬಾರಿ ಎಷ್ಟು ಫಿಟ್ಮೆಂಟ್ ನೀಡುತ್ತದೆ? ಮತ್ತು ವೇತನ ಆಯೋಗದ ಶಿಫಾರಸು ಯಾವಾಗಿನಿಂದ ಜಾರಿಗೆ ಬರುತ್ತದೆ? ಎಂಬುದು ಕುತೂಹಲದ ಅಂಶವಾಗಿದೆ. ವೇತನ ಏರಿಕೆಯಲ್ಲಿ ಫಿಟ್ಮೆಂಟ್ ಸೌಲಭ್ಯ ಪ್ರಮುಖ ಪಾತ್ರವನ್ನು ವಹಿಸುತ್ತದೆ.
ವೇತನ ಆಯೋಗ 18 ತಿಂಗಳಿನಲ್ಲಿ ವರದಿ ನೀಡಿದರೂ ಸಹ ಅದು ಸರ್ಕಾರಕ್ಕೆ ಸಲ್ಲಿಕೆಯಾಗುವುದು 2027ರಲ್ಲಿ. ಆದರೆ ಆಯೋಗದ ವರದಿಯನ್ನು ಸರ್ಕಾರ ಒಪ್ಪಿ 2026ರ ಜನವರಿ 1 ರಿಂದಲೇ ಪೂರ್ವಾನ್ವಯವಾಗುವಂತೆ ಜಾರಿಗೊಳಿಸುತ್ತದೆಯೇ? ಎಂದು ಸರ್ಕಾರಿ ನೌಕರರು ಕಾಯುತ್ತಿದ್ದಾರೆ.
ರಾಜ್ಯಸಭೆಯಲ್ಲಿ 8ನೇ ವೇತನ ಆಯೋಗದ ಕುರಿತು ಸದಸ್ಯರು ಕೇಳಿದ್ದ ಪ್ರಶ್ನೆಗೆ ಕೇಂದ್ರ ಹಣಕಾಸು ಸಚಿವಾಲಯ 8ನೇ ವೇತನ ಆಯೋಗ ರಚನೆ ಮಾಡಿ ಆದೇಶವನ್ನು ಹೊರಡಿಸಲಾಗಿದೆ ಎಂದು ಮಾತ್ರ ಉತ್ತರ ನೀಡಿತ್ತು. ವರದಿ ಸಲ್ಲಿಕೆ ಅವಧಿ ಮತ್ತು ಯಾವಾಗಿನಿಂದ ಅದನ್ನು ಜಾರಿಗೊಳಿಸುತ್ತೇವೆ? ಎಂಬ ಕುರಿತು ಸ್ಪಷ್ಟವಾದ ಮಾಹಿತಿಯನ್ನು ಸರ್ಕಾರ ನೀಡಿರಲಿಲ್ಲ.
ಸದ್ಯ ಒಬ್ಬ ನೌಕರನ ಕನಿಷ್ಠ ವೇತನ 18,000 ರೂ. ಇದ್ದರೆ 2.15ರ ಫಿಟ್ಮೆಂಟ್ ಅಂಶ ಸೇರಿ ವೇತನ 38,700 ರೂ.ಗೆ ಏರಿಕೆಯಾಗುತ್ತದೆ. ನಿವೃತ್ತ ನೌಕರರ ಪಿಂಚಣಿ ಸಹ ಏರಿಕೆಯಾಗುತ್ತದೆ. ಆದ್ದರಿಂದ ಯಾವಾಗಿನಿಂದ 8ನೇ ವೇತನ ಆಯೋಗದ ವರದಿ ಅನ್ವಯ ಎಂಬುದು ಸರ್ಕಾರಿ ನೌಕರರ ಪ್ರಶ್ನೆಯಾಗಿದೆ.
ಕೇಂದ್ರ ಸರ್ಕಾರ ಸಾಮಾನ್ಯವಾಗಿ ಹಲವು ವರ್ಷಗಳಿಂದ ಫೆಬ್ರವರಿ 1ರಂದು ಬಜೆಟ್ ಮಂಡಿಸುತ್ತಿದೆ. ಆದರೆ ಬಜೆಟ್ ಮಂಡನೆ ವೇಳೆ 8ನೇ ವೇತನ ಆಯೋಗದ ವರದಿ ಸಲ್ಲಿಕೆ ಆಗಿರುವುದಿಲ್ಲ. ಆದ್ದರಿಂದ ಬಜೆಟ್‌ನಲ್ಲಿ ವೇತನ ಆಯೋಗದ ವರದಿ ಜಾರಿಗೆ ಅನುದಾನವನ್ನು ಘೋಷಣೆ ಮಾಡಲಾಗುತ್ತದೆಯೇ? ಎಂದು ನೌಕರರು ಕೇಳುತ್ತಿದ್ದಾರೆ.

