ಬೆಂಗಳೂರು : ಬೆಂಗಳೂರಲ್ಲಿ ಕಾಮುಕರ ಕಾಟ ಹೆಚ್ಚಾಗುತ್ತಿದೆ. ಹೆಣ್ಣು ಮಕ್ಕಳು ರಸ್ತೆಯಲ್ಲಿ ಒಬ್ಬಂಟಿಯಾಗಿ ಹೋಗಲು ಹೆದರುವ ಪರಿಸ್ಥಿತಿ ನಿರ್ಮಾಣವಾಗಿದೆ. ಯುವಕನೋರ್ವ ನಡುರಸ್ತೆಯಲ್ಲೇ ಯುವತಿಗೆ ಲೈಂಗಿಕ ಕಿರುಕುಳ ನೀಡಿದ ಘಟನೆ ಜ್ಞಾನಭಾರತಿ ಪೊಲೀಸ್ ಠಾಣಾ ವ್ಯಾಪ್ತಿಯ ಉಲ್ಲಾಳ ಮುಖ್ಯರಸ್ತೆಯ ಖಾಸಗಿ ಪಿಜಿ ಮುಂದೆ ನಡೆದಿದೆ.
ನವೀನ್ ಕುಮಾರ್ ಎಂಬಾತ ಕೃತ್ಯ ಎಸಗಿದ ಆರೋಪಿ. ಯುವತಿಯ ಮೈ ಕೈ ಮುಟ್ಟಿ ಬಟ್ಟೆ ಹರಿದು ಗಲಾಟೆ ಮಾಡಿ ಕಿರುಕುಳ ನೀಡಿದ್ದಾನೆ ಎನ್ನಲಾಗಿದೆ. ಈತ ಪ್ರೀತಿ ಮಾಡುವಂತೆ ಯುವತಿ ಹಿಂದೆ ಬಿದ್ದಿದ್ದನು ಎನ್ನಲಾಗಿದೆ. ಆಕೆ ನಿರಾಕರಿಸಿದ್ದಕ್ಕೆ ಆತ ಲೈಂಗಿಕ ಕಿರುಕುಳ ನೀಡಿದ್ದಾನೆ ಎನ್ನಲಾಗಿದೆ.
ಇನ್ ಸ್ಟಾಗ್ರಾಂ ನಲ್ಲಿ ನವೀನ್ ಯುವತಿಗೆ ಪರಿಚಯವಾಗಿದ್ದನು. ಪರಿಚಯವಾದ ಬಳಿಕ ಪ್ರೀತಿ ಮಾಡುವಂತೆ ಈತ ಪೀಡಿಸಿದ್ದಾನೆ. ಯುವಕನ ಕಾಟ ತಾಳಲಾರದೇ ಯುವತಿ ಪಿಜಿ ಕೂಡ ಬದಲಿಸಿದ್ದಳು. ಆದರೂ ಕಾಮುಕ ಪದೇ ಪದೇ ಕಿರುಕುಳ ನೀಡುತ್ತಿದ್ದನು ಎನ್ನಲಾಗಿದೆ.
ಈ ಸಂಬಂಧ ಯುವತಿ ಜ್ಞಾನಭಾರತಿ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪೊಲೀಸರು ಆರೋಪಿ ನವೀನ್ ಕುಮಾರ್ ನನ್ನು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ.

