ಉತ್ತರ ಪ್ರದೇಶದ ಅಲಿಗಢ ಜಿಲ್ಲೆಯಲ್ಲಿ ಅತ್ಯಂತ ದಾರುಣ ಮತ್ತು ಮೈ ನಡುಗಿಸುವ ಘಟನೆಯೊಂದು ನಡೆದಿದೆ. ಬೀದಿ ನಾಯಿ ಕಚ್ಚಿದ ಕೇವಲ ಕೆಲವೇ ಗಂಟೆಗಳಲ್ಲಿ 23 ವರ್ಷದ ಯುವಕನೊಬ್ಬ ರೇಬೀಸ್ ಲಕ್ಷಣಗಳಿಂದಾಗಿ ನಾಯಿಯಂತೆ ವರ್ತಿಸಲು ಶುರು ಮಾಡಿದ್ದು, ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ.
ನಡೆದಿದ್ದೇನು? ಖೈರ್ ತಹಸಿಲ್‌ನ ಉತ್ವಾರ್ ಗ್ರಾಮದ ರಾಮ್‌ಕುಮಾರ್ ಅಲಿಯಾಸ್ ರಾಮು ಎಂಬ ಯುವಕನಿಗೆ ಡಿಸೆಂಬರ್ 20 ರಂದು ರಸ್ತೆಯಲ್ಲಿ ಹೋಗುತ್ತಿದ್ದಾಗ ಹುಚ್ಚು ನಾಯಿಯೊಂದು ಕಾಲಿಗೆ ಕಚ್ಚಿತ್ತು. ಗಾಯವು ಸಣ್ಣದಾಗಿ ಕಂಡಿದ್ದರಿಂದ ಕುಟುಂಬಸ್ಥರು ಆಸ್ಪತ್ರೆಗೆ ಹೋಗುವ ಬದಲು ಮನೆಯಲ್ಲೇ ಪ್ರಾಥಮಿಕ ಚಿಕಿತ್ಸೆ ನೀಡಿದ್ದರು. ಆದರೆ ಮರುದಿನವೇ ರಾಮು ಸ್ಥಿತಿ ಹದಗೆಡಲು ಶುರುವಾಗಿದೆ.
ನಾಯಿಯಂತೆ ವರ್ತಿಸಿದ ಯುವಕ ರಾಮು ಇದ್ದಕ್ಕಿದ್ದಂತೆ ವಿಚಿತ್ರವಾಗಿ ವರ್ತಿಸಲು ಶುರು ಮಾಡಿದ್ದು, ನಾಯಿಯಂತೆ ಶಬ್ದ ಮಾಡುವುದು ಮತ್ತು ಎದುರಿಗೆ ಬಂದವರನ್ನು ಕಚ್ಚಲು ಯತ್ನಿಸಿದ್ದಾನೆ. ಯುವಕ ಅತಿಯಾದ ಆಕ್ರಮಣಕಾರಿಯಾಗಿ ವರ್ತಿಸಿದ್ದರಿಂದ ಹತೋಟಿಗೆ ತರಲಾಗದೆ ಗ್ರಾಮಸ್ಥರು ಆತನನ್ನು ಮಂಚಕ್ಕೆ ಹಗ್ಗದಿಂದ ಕಟ್ಟಿ ಹಾಕಿದ್ದಾರೆ. ಈ ಮನಕಲಕುವ ದೃಶ್ಯದ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ದಿಲ್ಲೀಯ ಏಮ್ಸ್‌ಗೆ ದಾಖಲು ಪರಿಸ್ಥಿತಿ ಕೈಮೀರುತ್ತಿರುವುದನ್ನು ಕಂಡ ಕುಟುಂಬಸ್ಥರು ತಕ್ಷಣ ಆತನನ್ನು ಖೈರ್ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಿದ್ದಾರೆ. ಯುವಕನ ಸ್ಥಿತಿಯನ್ನು ಗಮನಿಸಿದ ವೈದ್ಯರು ಇದು ರೇಬೀಸ್‌ನ ತೀವ್ರ ಲಕ್ಷಣಗಳೆಂದು ಶಂಕಿಸಿ ಹೆಚ್ಚಿನ ಚಿಕಿತ್ಸೆಗಾಗಿ ದೆಹಲಿಯ ಏಮ್ಸ್ (AIIMS) ಆಸ್ಪತ್ರೆಗೆ ದಾಖಲಿಸಲು ಸೂಚಿಸಿದ್ದಾರೆ. ಸದ್ಯ ಯುವಕನ ಸ್ಥಿತಿ ಅತ್ಯಂತ ಗಂಭೀರವಾಗಿದ್ದು, ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾನೆ.
ನಾಯಿ ಕಚ್ಚಿದ ತಕ್ಷಣ ವೈದ್ಯಕೀಯ ಚಿಕಿತ್ಸೆ ಮತ್ತು ಲಸಿಕೆ ಪಡೆಯುವುದು ಎಷ್ಟು ಮುಖ್ಯ ಎಂಬುದನ್ನು ಈ ಘಟನೆ ಮತ್ತೊಮ್ಮೆ ಸಾರಿ ಹೇಳಿದೆ. ಸಣ್ಣ ಗಾಯವೆಂದು ನಿರ್ಲಕ್ಷಿಸುವುದು ಪ್ರಾಣಕ್ಕೇ ಕುತ್ತು ತರಬಹುದು ಎಂದು ವೈದ್ಯರು ಎಚ್ಚರಿಸಿದ್ದಾರೆ.

