ಬೆಂಗಳೂರು: ರಾತ್ರಿ ಕಣ್ಣು ಕಾಣಿಸಲ್ಲ ಎಂದು ಹಗಲು ಹೊತ್ತಲ್ಲೇ ಮನೆಗಳ್ಳತನ ಮಾಡುತ್ತಿದ್ದ ಖತರ್ನಾಕ್ ಅಂತರಾಜ್ಯ ಕಳ್ಳನನ್ನು ಬಂಧಿಸುವಲ್ಲಿ ಬೆಂಗಳೂರು ಪೊಲೀಸರು ಯಶಸ್ವಿಯಾಗಿದ್ದಾರೆ.
ಇರುಳು ಕುರುಡುತನ ಸಮಸ್ಯೆಯಿಂದ ಬಳಲುತ್ತಿದ್ದ ಆರೋಪಿ ಜೀವನ ಸಾಗಿಸಲು ಹಗಲು ಹೊತ್ತಲ್ಲೇ ಮನೆಗಳ್ಳತನ ಮಾಡುವುದನ್ನು ಕಾಯಕವನ್ನಾಗಿ ಮಾಡಿಕೊಂಡಿದ್ದಾನೆ. ಬೆಳಿಗ್ಗೆಯಿಂದ ಸಂಜೆವರೆಗೂ ಬೀಗ ಹಾಕಿರುತ್ತಿದ್ದ ಮನೆಗಳನ್ನೇ ಟಾರ್ಗೆಟ್ ಮಾಡಿ ಕಳ್ಳತನ ಮಾಡುತ್ತಿದ್ದ ಆಸಾಮಿ, ಮೊಹಮ್ಮದ್ ಖಾನ್ ನನ್ನು ಪೊಲೀಸರು ಬಂಧಿಸಿದ್ದಾರೆ.
ಜೆಪಿನಗರದ ನಿವಾಸಿ ಕಿರುತೆರೆ ನಟ ಪ್ರವೀಣ್ ಎಂಬುವವರ ಮನೆಯಲ್ಲಿ ಕಳ್ಳತನ ಮಾಡಿ ಮೊಹಮ್ಮದ್ ಖಾನ್ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ. ಕಿರುತೆರೆ ನಟ ಪ್ರವೀಣ್ ಪತ್ನಿ ಮೇಕಪ್ ಆರ್ಟಿಸ್ಟ್. ಪತಿ-ಪತ್ನಿ ಇಬ್ಬರೂ ಶೂಟಿಂಗ್ ಗೆ ಹೋಗಿದ್ದ ವೇಳೆ ಮನೆಗೆ ನುಗ್ಗಿದ್ದ ಕಳ್ಳ, ಮನೆಯಲ್ಲಿದ್ದ ಚಿನ್ನಾಭರಣ, ಹಣ ದೋಚಿ ಪರಾರಿಯಾಗಿದ್ದಾನೆ. ಈ ಬಗ್ಗೆ ಜೆಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಸದ್ಯ ಕಳ್ಳನನ್ನು ಬಂಧಿಸಿರುವ ಪೊಲೀಸರು ವಿಚಾರಣೆ ನಡೆಸಿದಾಗ ಈತ ಕರ್ನಾಟಕ, ಆಂಧ್ರಪ್ರದೇಶ, ತಮಿಳುನಾಡು ಸೇರಿದಂತೆ ಒಟ್ಟು ಏಳು ರಾಜ್ಯಗಳಲ್ಲಿ ಕಳ್ಳತನ ಮಾಡುತ್ತಿದ್ದ. ಹಗಲು ಹೊತ್ತಿನಲ್ಲಿ ಮಾತ್ರ ಬೀಗ ಹಾಕಿದ್ದ ಮನೆಗಳಿಗೆ ನುಗ್ಗಿ ಕಳ್ಳತನ ಮಾಡುತ್ತಿದ್ದ ಎಂಬುದು ಬಯಲಾಗಿದೆ.
ಬಂಧಿತನಿಂದ 65.28 ಲಕ್ಷ ರೂ ಚಿನ್ನ, 1 ಕೆಜಿ 550 ಗ್ರಾಂ ಬೆಳ್ಳಿ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ.

