ಶಿವಮೊಗ್ಗ: ಎಟಿಎಂನಲ್ಲಿ ಹಣ ಬಿಡಿಸಲು ಹೋಗಿದ್ದ ರೈತರೊಬ್ಬರಿಗೆ 79,000 ರೂ. ವಂಚಿಸಲಾಗಿದೆ. ಭದ್ರಾವತಿಯ ಬೊಮ್ಮನಕಟ್ಟೆಯ ನಾರಾಯಣ ವಂಚನೆಗೊಳಗಾದವರು.
11 ತಿಂಗಳ ಹಿಂದೆ ರಂಗಪ್ಪ ಸರ್ಕಲ್ ಸಮೀಪ ಬ್ಯಾಂಕ್ ಆಫ್ ಬರೋಡಾ ಎಟಿಎಂನಲ್ಲಿ ಹಣ ಬಿಡಿಸಲು ನಾರಾಯಣ ಹೋಗಿದ್ದಾರೆ. ಅವರ ಹಿಂದೆ ನಿಂತಿದ್ದ ಇಬ್ಬರು ಅಪರಿಚಿತರಲ್ಲಿ ಒಬ್ಬ ಹಣ ಬಿಡಿಸಿ ಕೊಡುವುದಾಗಿ ಎಟಿಎಂ ಕಾರ್ಡ್ ಪಡೆದುಕೊಂಡಿದ್ದಾನೆ. ಮೂರು ಬಾರಿ ಪ್ರಯತ್ನಿಸಿದರೂ ಎಟಿಎಂನಿಂದ ಹಣ ಬಂದಿರಲಿಲ್ಲ. ಹೀಗಾಗಿ ನಾರಾಯಣ ಅವರು ಕಾರ್ಡ್ ವಾಪಸ್ ಪಡೆದು ಮನೆಗೆ ಹೋಗಿದ್ದಾರೆ.
ನಂತರ ಅವರ ಖಾತೆಯಿಂದ ಹಂತ ಹಂತವಾಗಿ ಹಣ ಕಡಿತವಾದ ಬಗ್ಗೆ ಮೊಬೈಲ್ ಗೆ ಸಂದೇಶ ಬಂದಿದೆ. ಅಪರಿಚಿತರು ನಾರಾಯಣ ಅವರ ಎಟಿಎಂ ಕಾರ್ಡ್ ಪಡೆದು ಬೇರೆ ಕಾರ್ಡ್ ಕೊಟ್ಟಿದ್ದು ನಂತರ ಗೊತ್ತಾಗಿದೆ. ಡಿಸೆಂಬರ್ 17ರಂದು ಭದ್ರಾವತಿಯ ಹಳೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

