ಪ್ರೇಮಿಗಳು ಡೇಟಿಂಗ್ ಮಾಡುವಾಗ ಒಬ್ಬರಿಗೊಬ್ಬರು ಉಡುಗೊರೆ ನೀಡುವುದು, ಖರ್ಚು ಮಾಡುವುದು ಸಾಮಾನ್ಯ. ಆದರೆ, ಚೀನಾದಲ್ಲಿ ವ್ಯಕ್ತಿಯೊಬ್ಬ ತನ್ನ ಮಾಜಿ ಪ್ರೇಯಸಿಯ ಮೇಲೆ ಮಾಡಿದ ಪ್ರತಿಯೊಂದು ಖರ್ಚನ್ನು ಮರಳಿ ನೀಡುವಂತೆ ನ್ಯಾಯಾಲಯದ ಮೆಟ್ಟಿಲೇರಿರುವುದು ಈಗ ಜಾಗತಿಕ ಮಟ್ಟದಲ್ಲಿ ಸುದ್ದಿಯಾಗಿದೆ. ಅಷ್ಟೇ ಅಲ್ಲದೆ, ಆಕೆ ತನಗಿಂತ ಹೆಚ್ಚು ಆಹಾರ ಸೇವಿಸಿದ್ದಾಳೆ ಎಂದು ದೂರಿದ ಈತನ ವರ್ತನೆ ಕಂಡು ನೆಟ್ಟಿಗರು ಅಚ್ಚರಿ ವ್ಯಕ್ತಪಡಿಸಿದ್ದಾರೆ.
ಪ್ರಕರಣದ ಹಿನ್ನೆಲೆ: ಚೀನಾದ ಹೈಲಾಂಗ್ಜಿಯಾಂಗ್ ಪ್ರಾಂತ್ಯದ ‘ಹೇ’ ಎಂಬ ಹೆಸರಿನ ವ್ಯಕ್ತಿ ಮತ್ತು ‘ವಾಂಗ್’ ಎಂಬ ಯುವತಿ ವಿವಾಹವಾಗಲು ನಿಶ್ಚಯಿಸಿದ್ದರು. ಮದುವೆ ಫಿಕ್ಸ್ ಆದಾಗ ಚೀನಾದ ಸಂಪ್ರದಾಯದಂತೆ ವರನ ಕಡೆಯವರು ವಧುವಿನ ಕುಟುಂಬಕ್ಕೆ ‘ಬ್ರೈಡ್ ಪ್ರೈಸ್’ (ವರದಕ್ಷಿಣೆಯ ವಿರುದ್ಧ ರೂಪ) ನೀಡುತ್ತಾರೆ. ಅದರಂತೆ ಹೇ ಕುಟುಂಬವು ಸುಮಾರು 2.40 ಲಕ್ಷ ರೂಪಾಯಿ (20,000 ಯುವಾನ್) ಹಣವನ್ನು ವಾಂಗ್ ಕುಟುಂಬಕ್ಕೆ ನೀಡಿತ್ತು. ಆದರೆ ಕಾರಣಾಂತರಗಳಿಂದ ಇವರ ನಿಶ್ಚಿತಾರ್ಥ ಮುರಿದು ಬಿದ್ದಿತ್ತು.
ಒಳ ಉಡುಪಿನ ಹಣಕ್ಕೂ ಬೇಡಿಕೆ! ನಿಶ್ಚಿತಾರ್ಥ ಮುರಿದ ಬೆನ್ನಲ್ಲೇ ನ್ಯಾಯಾಲಯಕ್ಕೆ ಹೋದ ವ್ಯಕ್ತಿ, ತಾನು ನೀಡಿದ್ದ 2.40 ಲಕ್ಷ ರೂಪಾಯಿ ವಾಪಸ್ ಕೊಡಿಸಬೇಕು ಎಂದು ಕೇಳಿದ್ದಲ್ಲದೆ, ಡೇಟಿಂಗ್ ಅವಧಿಯಲ್ಲಿ ಆಕೆಗಾಗಿ ಖರ್ಚು ಮಾಡಿದ್ದ ಸುಮಾರು 3.50 ಲಕ್ಷ ರೂಪಾಯಿಗಳನ್ನು (30,000 ಯುವಾನ್) ನೀಡುವಂತೆ ಪಟ್ಟು ಹಿಡಿದಿದ್ದ. ತಾನು ಆಕೆಗೆ ಕೊಡಿಸಿದ್ದ ಕಪ್ಪು ಬಣ್ಣದ ಟೈಟ್ಸ್ ಮತ್ತು ಒಳ ಉಡುಪುಗಳ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದ! ಇದಕ್ಕೆ ಪ್ರತಿಕ್ರಿಯಿಸಿದ ಯುವತಿ, “ನೀನು ಕೊಡಿಸಿದ ಉಡುಪುಗಳನ್ನು ನಾನು ಧರಿಸಿದಾಗ ನೀನು ಆನಂದಿಸಿರಲಿಲ್ಲವೇ? ಇವನು ಮನುಷ್ಯನೋ ಅಥವಾ ಕ್ಯಾಲ್ಕುಲೇಟರ್ ಯಂತ್ರವೋ?” ಎಂದು ಕಿಡಿಕ್ಕಾರಿದ್ದಳು.
ನ್ಯಾಯಾಲಯ ನೀಡಿದ ತೀರ್ಪು ಏನು? ಈ ವಿಚಿತ್ರ ಪ್ರಕರಣದ ವಿಚಾರಣೆ ನಡೆಸಿದ ಚೀನಾದ ನ್ಯಾಯಾಲಯವು ಮಹತ್ವದ ತೀರ್ಪು ನೀಡಿದೆ. ಡೇಟಿಂಗ್ ಅವಧಿಯಲ್ಲಿ ಪ್ರೀತಿಯಿಂದ ನೀಡಿದ ಉಡುಗೊರೆಗಳು ಅಥವಾ ಮಾಡಿದ ಖರ್ಚುಗಳನ್ನು ಮರಳಿ ಪಡೆಯಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದೆ. ಆದ್ದರಿಂದ ಯುವತಿಯು ಆ 3.50 ಲಕ್ಷ ರೂಪಾಯಿಗಳನ್ನು ನೀಡುವ ಅಗತ್ಯವಿಲ್ಲ ಎಂದು ಹೇಳಿದೆ. ಆದರೆ, ಮದುವೆಯ ಉದ್ದೇಶಕ್ಕಾಗಿ ನೀಡಲಾಗಿದ್ದ ‘ಬ್ರೈಡ್ ಪ್ರೈಸ್’ ಮೊತ್ತದಲ್ಲಿ ಅರ್ಧದಷ್ಟು ಹಣವನ್ನು (ಸುಮಾರು 1.20 ಲಕ್ಷ ರೂ.) ಯುವತಿಯು ಮರಳಿ ನೀಡಬೇಕು ಎಂದು ಆದೇಶಿಸಿದೆ. ಈ ತೀರ್ಪಿಗೆ ಇಬ್ಬರೂ ಒಪ್ಪಿಗೆ ಸೂಚಿಸಿದ್ದಾರೆ.
ನೆಟ್ಟಿಗರ ಆಕ್ರೋಶ: ಈ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದಂತೆ ವ್ಯಕ್ತಿಯ ವಿರುದ್ಧ ಭಾರಿ ಟೀಕೆಗಳು ವ್ಯಕ್ತವಾಗಿವೆ. “ಆಕೆಗೆ ಸಂಬಳ ನೀಡದ ನಿನಗೆ ಖರ್ಚಿನ ಬಗ್ಗೆ ಕೇಳುವ ಹಕ್ಕಿಲ್ಲ”, “ಈಕೆಗೆ ಇವನಿಂದ ಮುಕ್ತಿ ಸಿಕ್ಕಿದ್ದೇ ದೊಡ್ಡ ಲಾಭ” ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ. ಆಕೆ ಹೆಚ್ಚು ಊಟ ಮಾಡುತ್ತಿದ್ದಳು ಎಂದು ದೂರಿರುವುದನ್ನು ಕಂಡು ಅನೇಕರು “ಇವನಿಗೆ ಹೆಂಡತಿ ಬೇಕಿಲ್ಲ, ಕೆಲಸದವರು ಬೇಕು” ಎಂದು ಲೇವಡಿ ಮಾಡಿದ್ದಾರೆ.

