ಬೆಂಗಳೂರು: ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸಂಘರ್ಷದ ಹಾದಿ ಬಿಟ್ಟು ಸಂಧಾನದ ಹಾದಿ ಹಿಡಿದಿದ್ದಾರೆ. ಬೆಂಗಳೂರಿನಲ್ಲಿ ಮಾಜಿ ಸಚಿವ ಕೆ.ಎನ್. ರಾಜಣ್ಣ ಅವರ ನಿವಾಸಕ್ಕೆ ತೆರಳಿದ ಡಿಕೆ ರಾಜಣ್ಣರನ್ನು ಭೇಟಿ ಮಾಡಿ ಸಮಾಲೋಚನೆ ನಡೆಸಿದ್ದಾರೆ. ಉಭಯ ನಾಯಕರ ಭೇಟಿ ಭಾರಿ ಕುತೂಹಲ ಮೂಡಿಸಿದೆ.
10 ರಿಂದ 12 ನಿಮಿಷಗಳ ಕಾಲ ರಾಜಣ್ಣ ಅವರೊಂದಿಗೆ ಚರ್ಚೆ ನಡೆಸಿ ಡಿಕೆ ವಾಪಸ್ ಆಗಿದ್ದಾರೆ. ಬಾಲಬ್ರೂಯಿ ರಸ್ತೆಯಲ್ಲಿರುವ ರಾಜಣ್ಣ ಅವರ ಅಪಾರ್ಟ್ಮೆಂಟ್ ನಲ್ಲಿ ಡಿಕೆ ಭೇಟಿಯಾಗಿ ಚರ್ಚೆ ನಡೆಸಿದ್ದಾರೆ. ಬೆಳಗಾವಿ ಅಧಿವೇಶನದ ವೇಳೆಯೂ ರಾಜಣ್ಣ ಅವರನ್ನು ಮಾತನಾಡಿಸಲು ಡಿಕೆ ಯತ್ನಿಸಿದ್ದರು. ಆದರೆ ಡಿಕೆ ಜೊತೆ ಮಾತನಾಡದೆ ರಾಜಣ್ಣ ತೆರಳಿದ್ದರು ಇದೀಗ ರಾಜಣ್ಣ ಭೇಟಿಗೆ ತಾವೇ ಮುಂದೆ ಬಂದ ಡಿ.ಕೆ. ಶಿವಕುಮಾರ್ ನಿವಾಸಕ್ಕೆ ತೆರಳಿ ಚರ್ಚೆ ನಡೆಸಿದ್ದಾರೆ.
ಅಪೆಕ್ಸ್ ಬ್ಯಾಂಕ್ ವಿಚಾರವಾಗಿ ನಾಯಕರು ಚರ್ಚೆ ನಡೆಸಿದ್ದಾರೆ. ತಮ್ಮ ಆಪ್ತ ಎಂಎಲ್ಸಿ ರವಿ ಅವರನ್ನು ಕಣಕ್ಕಿಳಿಸಲು ಡಿಕೆ ಪ್ಲಾನ್ ಮಾಡಿಕೊಂಡಿದ್ದಾರೆ. ಸಹಕಾರಿ ಕ್ಷೇತ್ರದಲ್ಲಿ ರಾಜಣ್ಣ ಮೂರು ದಶಕಗಳಿಂದ ಪ್ರಾಬಲ್ಯ ಹೊಂದಿದ್ದಾರೆ. ಈ ಹಿನ್ನೆಲೆಯಲ್ಲಿ ರಾಜಣ್ಣ ಅವರನ್ನು ಭೇಟಿಯಾಗಿ ಡಿ.ಕೆ. ಶಿವಕುಮಾರ್ ಚರ್ಚೆ ನಡೆಸಿದ್ದಾರೆ ಎಂದು ಹೇಳಲಾಗಿದೆ.

