ಬೆಂಗಳೂರು: ಮೆಡಿಕಲ್ ಕಾಲೇಜಿನಿಂದ ಪಿಜಿಗೆ ತೆರಳುತ್ತಿದ್ದ ವೈದ್ಯೆ ಮೈ ಕೈ ಮುಟ್ಟಿಯ ಅಸಭ್ಯವಾಗಿ ವರ್ತಿಸಿದ ಕಿಡಿಗೇಡಿ ಲೈಂಗಿಕ ಕಿರುಕುಳ ನೀಡಿ ಪರಾರಿಯಾದ ಘಟನೆ ನಡೆದಿದ್ದು, 28 ವರ್ಷದ ವೈದ್ಯೆ ನೀಡಿದ ದೂರಿನ ಅನ್ವಯ ಪ್ರಕರಣ ದಾಖಲಿಸಿ ಆರೋಪಿ ಪತ್ತೆಗೆ ವಿಶೇಷ ತಂಡ ರಚಿಸಲಾಗಿದೆ.
ಘಟನೆ ನಡೆದ ಸ್ಥಳ ಹಾಗೂ ಸುತ್ತಮುತ್ತಲಿನ ಸಿಸಿ ಕ್ಯಾಮೆರಾಗಳಲ್ಲಿ ಸೆರೆಯಾದ ದೃಶ್ಯಾವಳಿ ಪರಿಶೀಲಿಸಲಾಗುತ್ತಿದೆ. ರಾತ್ರಿ ಪಾಳಿ ಕೆಲಸ ಮುಗಿಸಿ ಆಸ್ಪತ್ರೆಯಿಂದ ವೈದ್ಯೆ ನಡೆದುಕೊಂಡು ಹೋಗುವಾಗ ಬಿಳಿ ಬಣ್ಣದ ಸ್ಕೂಟರ್ ನಲ್ಲಿ ಬಂದಿದ್ದ ಆರೋಪಿ ವಿಳಾಸ ಕೇಳುವ ನೆಪದಲ್ಲಿ ವೈದ್ಯೆಯನ್ನು ಮಾತನಾಡಿಸಿದ್ದಾನೆ. ಸ್ಕೂಟರ್ ನಿಂದ ಇಳಿದು ಮೈಕೈ ಮುಟ್ಟಿ ಅಸಭ್ಯವಾಗಿ ವರ್ತಿಸಿದ್ದಾನೆ. ವೈದ್ಯೆ ಜೋರಾಗಿ ಕಿರುಚಿದಾಗ ಸ್ಥಳದಿಂದ ಪರಾರಿಯಾಗಿದ್ದಾನೆ. ಸೋಲದೇವನಹಳ್ಳಿ ಪೊಲೀಸ್ ಠಾಣೆಗೆ ವೈದ್ಯೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸಿದ್ದಾರೆ.

