ಶಿವಮೊಗ್ಗ: ಶಿವಮೊಗ್ಗ ಜಿಲ್ಲೆ ಹೊಳೆಹೊನ್ನೂರು ಪೊಲೀಸ್ ಠಾಣೆ ವ್ಯಾಪ್ತಿಯ ಮಲ್ಲಾಪುರ ಗ್ರಾಮದ ಬಳಿ ಸೋಮವಾರ ರಾತ್ರಿ 10:45 ರ ಸುಮಾರಿಗೆ ನವಜಾತ ಗಂಡು ಶಿಶು ಪತ್ತೆಯಾಗಿದೆ.
ಸಾಸ್ವೆಹಳ್ಳಿ ಗ್ರಾಮದ ಕುಶ ಅವರು ತಮ್ಮ ದೊಡ್ಡಪ್ಪನ ಪುತ್ರ ತಿಪ್ಪೇಶ್ ಗೆ ಅನಾರೋಗ್ಯದ ಕಾರಣ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಹಿಂದಿರುಗುವಾಗ ಮಗು ಅಳುವ ಶಬ್ದ ಕೇಳಿಸಿದೆ. ಸಾಸ್ವೆಹಳ್ಳಿ ಮಲ್ಲಾಪುರ ಗ್ರಾಮದ ಸಮೀಪ ಮಗು ಅಳುವ ಶಬ್ದ ಕೇಳಿಸಿದ್ದರಿಂದ ಕುಶ ತಮ್ಮ ಅತ್ತಿಗೆ ಸಹಾಯದೊಂದಿಗೆ ಸ್ಥಳಕ್ಕೆ ಹೋಗಿ ನೋಡಿದ್ದಾರೆ.
ಈ ವೇಳೆ ಸ್ಥಳದಲ್ಲಿ 2 ರಿಂದ 3 ದಿನದ ಗಂಡು ಶಿಶು ಪತ್ತೆಯಾಗಿದೆ. ಸುತ್ತಮುತ್ತಲಿನ ಮನೆಗಳಲ್ಲಿ ವಿಚಾರಿಸಿದಾಗ ಆ ಮಗು ತಮಗೆ ಸಂಬಂಧಿಸಿಲ್ಲ ಎಂದು ಹೇಳಿದ್ದಾರೆ. ನಂತರ ಹೊಳೆಹೊನ್ನೂರು ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.

