ಬೆಂಗಳೂರು: ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ(ಕೆಎಂವಿಎಸ್‌ಟಿಡಿಸಿಎಲ್) ನಿಧಿಯ ದುರುಪಯೋಗ ಮತ್ತು ದುರುಪಯೋಗಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಮಾಜಿ ಸಚಿವ ಬಿ. ನಾಗೇಂದ್ರಗೆ ಸೇರಿದ 8.07 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಜಾರಿ ನಿರ್ದೇಶನಾಲಯ(ಇಡಿ) ಜಪ್ತಿ ಮಾಡಿದೆ.
ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯಡಿ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ವಸತಿ ಮತ್ತು ವಾಣಿಜ್ಯ ಆಸ್ತಿ ಸೇರಿದಂತೆ 4 ಸ್ಥಿರಾಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ಅಪರಾಧದ ಉಳಿದ ಆದಾಯ ಪತ್ತೆಹಚ್ಚಲು ಸಾಧ್ಯವಾಗಲಿಲ್ಲ. ಅವುಗಳಿಗೆ ಬಿ. ನಾಗೇಂದ್ರ ಬೇರೆ ವ್ಯವಸ್ಥೆ ಮಾಡಿರಬಹುದು ಅಥವಾ ಮರೆ ಮಾಡಿರಬಹುದು ಎಂದು ಹೇಳಿಕೆ ತಿಳಿಸಿದೆ.
ವಾಲ್ಮೀಕಿ ಅಭಿವೃದ್ಧಿ ನಿಗಮದ ಖಾತೆಗಳಿಂದ ಹಣ ವರ್ಗಾವಣೆ ಮಾಡಲಾಗಿತ್ತು. ನಿಗಮದ ಕೋಟ್ಯಂತರ ರೂಪಾಯಿ ವರ್ಗಾವಣೆಯಾಗಿದ್ದು, ಹಣವನ್ನು ನಕಲಿ ಖಾತೆಗಳಿಗೆ ವರ್ಗಾವಣೆ ಮಾಡಲಾಗಿತ್ತು ನಂತರ ಶೆಲ್ ಘಟಕಗಳ ಮೂಲಕ ಇತರರಿಗೆ ಹಣ ವರ್ಗಾವಣೆ ಮಾಡಲಾಗಿತ್ತು. ಈ ಸಂಬಂಧ ಪೊಲೀಸ್, ಸಿಬಿಐ ಎಫ್ಐಆರ್ ದಾಖಲಾಗಿತ್ತು.
ಪಿಎಂಎಲ್‌ಎ, 2002 ರ ಅಡಿಯಲ್ಲಿ ಸುಮಾರು 8.07 ಕೋಟಿ ರೂ. ಮೌಲ್ಯದ ಮಾಜಿ ಸಚಿವ ಬಿ. ನಾಗೇಂದ್ರ ಅವರ ವಸತಿ/ವಾಣಿಜ್ಯ ಭೂಮಿ ಮತ್ತು ಕಟ್ಟಡ ಸೇರಿದಂತೆ ನಾಲ್ಕು (4) ಸ್ಥಿರ ಆಸ್ತಿಗಳನ್ನು ಇಡಿ, ಬೆಂಗಳೂರು ವಲಯ ಕಚೇರಿ ತಾತ್ಕಾಲಿಕವಾಗಿ ಮುಟ್ಟುಗೋಲು ಹಾಕಿಕೊಂಡಿದೆ. ಈ ಪ್ರಕರಣದಲ್ಲಿ ಇಲ್ಲಿಯವರೆಗೆ ಒಟ್ಟು 13.01 ಕೋಟಿ ರೂ. ಮೌಲ್ಯದ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ ಎಂದು ಇಡಿ ತಿಳಿಸಿದೆ.

