ಬೆಂಗಳೂರು: ಶೆಡ್ ಮೇಲೆ ಸಿಮೆಂಟ್ ಇಟ್ಟಿಗೆಗಳು ಬಿದ್ದು 4 ವರ್ಷದ ಮಗು ಸಾವನ್ನಪ್ಪಿದ ಘಟನೆ ಹೆಚ್.ಎ.ಎಲ್. ಪೊಲೀಸ್ ಠಾಣಾ ವ್ಯಾಪ್ತಿಯ ಚಿನ್ನಪ್ಪನಹಳ್ಳಿಯಲ್ಲಿ ನಡೆದಿದೆ.
ನಿರ್ಮಾಣ ಹಂತದ ಕಟ್ಟಡದ ನಾಲ್ಕನೇ ಮಹಡಿಯಿಂದ ಸಿಮೆಂಟ್ ಇಟ್ಟಿಗೆಗಳು ಬಿದ್ದು ಶೆಡ್ ನಲ್ಲಿದ್ದ ಮಗು ಮೃತಪಟ್ಟಿದ್ದು, ಮೂವರು ಗಾಯಗೊಂಡಿದ್ದಾರೆ. ಮನುಶ್ರೀ ಮೃತಪಟ್ಟ ಮಗು. ಶ್ರೀಯಾನ್(6), ಶೇಖರ್(5), ಮಮತಾ(30) ಗಾಯಗೊಂಡಿದ್ದು, ಮೂವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ನಿರ್ಮಾಣ ಹಂತದ ಕಟ್ಟಡ ಪಕ್ಕದಲ್ಲಿ ಸಿಮೆಂಟ್ ಶೀಟ್ ಶೆಡ್ ನಲ್ಲಿ ವಿಜಯಪುರ ಜಿಲ್ಲೆ ಸಿಂದಗಿಯ ಶ್ರೀಶೈಲ ಕುಟುಂಬದವರು ವಾಸವಾಗಿದ್ದರು. ಶ್ರೀನಿವಾಸಲು ಎಂಬುವರಿಗೆ ಸೇರಿದ ನಿರ್ಮಾಣ ಹಂತದ ಕಟ್ಟಡದ ನಾಲ್ಕನೇ ಮಹಡಿಯಿಂದ 10ಕ್ಕೂ ಅಧಿಕ ಸಿಮೆಂಟ್ ಇಟ್ಟಿಗೆಗಳು ಕೆಳಗೆ ಬಿದ್ದಿವೆ. ಇಟ್ಟಿಗೆ ಬಿದ್ದ ರಭಸಕ್ಕೆ ಶೆಡ್ ನಲ್ಲಿದ್ದ ಮಗು ಮೃತಪಟ್ಟಿದೆ. ಶೆಡ್ ಗೆ ಹಾನಿಯಾಗಿದೆ. ಸ್ಥಳಕ್ಕೆ ಹೆಚ್.ಎ.ಎಲ್. ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

