ಬೆಂಗಳೂರು: ಎಲ್ಲ ಸರ್ಕಾರಿ ಮತ್ತು ಅನುದಾನಿತ ಪದವಿಪೂರ್ವ ಕಾಲೇಜುಗಳ ಬೋಧಕರು, ಬೋಧಕೇತರ ಸಿಬ್ಬಂದಿ ಇನ್ನು ಮುಂದೆ ರಜೆ ಪಡೆಯಲು ಸೇವಾ ಮಿತ್ರ ತಂತ್ರಾಂಶದಲ್ಲಿ ಮನವಿ ನೀಡುವುದು ಕಡ್ಡಾಯವಾಗಿದೆ ಎಂದು ಶಾಲಾ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ.
ಪದವಿ ಪೂರ್ವ ಕಾಲೇಜುಗಳ ಸಿಬ್ಬಂದಿ, ಜಿಲ್ಲಾ ಉಪ ನಿರ್ದೇಶಕರ ಕಚೇರಿಯ ಅಧಿಕಾರಿ, ಸಿಬ್ಬಂದಿಗೆ ರಜೆ ಸೇರಿದಂತೆ ವಿವಿಧ ಸೇವೆಗಳಿಗಾಗಿ ಸೇವಾ ಮಿತ್ರ ತಂತ್ರಾಂಶ ಬಳಕೆಗೆ ತರಲಾಗಿದೆ. ನವೆಂಬರ್ ತಿಂಗಳ ಪರಿಶೀಲನೆಯ ವೇಳೆ ಸೇವಾ ಮಿತ್ರ ಬಳಕೆಗೆ ಆಸಕ್ತಿ ತೋರಿಸದ ಹಿನ್ನೆಲೆಯಲ್ಲಿ ಈಗ ಅದರ ಬಳಕೆಯನ್ನು ಕಡ್ಡಾಯ ಮಾಡಿ ಶಾಲಾ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ.
ಪದವಿ ಪೂರ್ವ ಕಾಲೇಜುಗಳ ಬೋಧಕರು, ಬೋಧಕೇತರ ಸಿಬ್ಬಂದಿ ಸೇರಿದಂತೆ ಇತರೆ ಅಧಿಕಾರಿಗಳು ಕಡ್ಡಾಯವಾಗಿ ಸೇವಾ ಮಿತ್ರ ತಂತ್ರಾಂಶದ ಮೂಲಕವೇ ರಜೆಗೆ ಮನವಿ ಸಲ್ಲಿಸಬೇಕು. ಇನ್ನು ಈ ತಂತ್ರಾಂಶದ ಬಳಕೆಯ ಬಗ್ಗೆ ಈಗಾಗಲೇ ತರಬೇತಿ ನೀಡಲಾಗಿದ್ದು, ಆದೇಶದ ನಂತರವೂ ಪಾಲಿಸದಿದ್ದರೆ ಸಮಸ್ಯೆಗೆ ಕಾಲೇಜುಗಳ ಮುಖ್ಯಸ್ಥರು ಜವಾಬ್ದಾರರು ಎಂದು ಶಾಲಾ ಶಿಕ್ಷಣ ಇಲಾಖೆ ಎಚ್ಚರಿಕೆ ನೀಡಿದೆ.

