HomeLatest Newsದಾವಣಗೆರೆಗೆ ಬ್ರ್ಯಾಂಡ್ ಹೆಸರು ತಂದುಕೊಟ್ಟಿದ್ದ ಧೀಮಂತ ನಾಯಕ: ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕ ಅಭಿವೃದ್ಧಿ ಹರಿಕಾರ...

ದಾವಣಗೆರೆಗೆ ಬ್ರ್ಯಾಂಡ್ ಹೆಸರು ತಂದುಕೊಟ್ಟಿದ್ದ ಧೀಮಂತ ನಾಯಕ: ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕ ಅಭಿವೃದ್ಧಿ ಹರಿಕಾರ ಶಾಮನೂರು ಶಿವಶಂಕರಪ್ಪ: ಸಿಎಂ ಸಂತಾಪ

ಬೆಳಗಾವಿ: ದಾವಣಗೆರೆ ಜಿಲ್ಲೆ ಸಾಮಾಜಿಕವಾಗಿ, ಆರ್ಥಿಕವಾಗಿ ಹಾಗೂ ಶೈಕ್ಷಣಿಕವಾಗಿ ಅಭಿವೃದ್ಧಿಯಾಗಲು ಶ್ಯಾಮನೂರು ಶಿವಶಂಕರಪ್ಪ ಕಾರಣ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

ಹಿರಿಯ ಶಾಸಕ ಶ್ಯಾಮನೂರು ಶಿವಶಂಕರಪ್ಪ ಅವರ ನಿಧನದ ಹಿನ್ನೆಲೆಯಲ್ಲಿ ವಿಧಾನಸಭೆಯಲ್ಲಿ ಮಂಡಿಸಲಾದ ಸಂತಾಪ ಸೂಚನಾ ನಿರ್ಣಯವನ್ನು ಬೆಂಬಲಿಸಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಶ್ಯಾಮನೂರು ಶಿವಶಂಕರಪ್ಪ ಅವರು ತಮ್ಮ 63 ನೇ ವಯಸ್ಸಿನಲ್ಲಿ ವಿಧಾನಸಭೆ ಪ್ರವೇಶಿಸಿ ಆರು ಬಾರಿ ಶಾಸಕರಾದವರು. ಒಮ್ಮೆ ಸಂಸತ್ ಸದಸ್ಯರಾಗಿದ್ದರು. ದೀರ್ಘ ಕಾಲ ರಾಜಕೀಯದಲ್ಲಿದ್ದರು.
ಅಖಿಲ ಭಾರತ ವೀರಶೈವ ಮಹಾಸಭಾ ಅಧ್ಯಕ್ಷರಾಗಿದ್ದರು. 1969ರಲ್ಲಿ ದಾವಣಗೆರೆ ಪುರಸಭೆ ಸದಸ್ಯರಾಗಿ ನಂತರ ನಗರಸಭೆ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು ಎಂದರು.

ದಾವಣಗೆರೆಯಲ್ಲಿ ಬಾಪೂಜಿ ವಿದ್ಯಾ ಕೇಂದ್ರದ ಮೂಲಕ ಇಂಜಿನಿಯರಿಂಗ್, ವೈದ್ಯಕೀಯ ಕಾಲೇಜುಗಳು ಸೇರಿದಂತೆ ಅನೇಕ ಸಂಸ್ಥೆಗಳನ್ನು ಕಟ್ಟಿ ಜಿಲ್ಲೆಯನ್ನು ವಿದ್ಯಾಕಾಶಿಯಾಗಿಸಿದರು. ಉದ್ಯಮಿಯಾಗಿ ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕ ಕ್ಷೇತ್ರಗಳಲ್ಲಿ ತಮ್ಮದೇ ಛಾಪು ಮೂಡಿಸಿದ್ದಾರೆ ಎಂದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಜವಳಿ ಕ್ಷೇತ್ರದ ಅವನತಿ ಪ್ರಾರಂಭವಾದಾಗ ದಾವಣಗೆರೆಗೆ ಒಂದು ಬ್ರಾಂಡ್ ಹೆಸರನ್ನು ಶ್ಯಾಮನೂರು ತಂದುಕೊಟ್ಟರು. ದೀರ್ಘಕಾಲ ಎಐಸಿಸಿ ಖಜಾಂಚಿ ಆಗಿದ್ದರು. ಎಲ್ಲರೊಂದಿಗೂ ಸ್ನೇಹ ಸಂಪಾದಿಸಿದ್ದವರು ಅಜಾತಶತ್ರು ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು ಎಂದು ಸ್ಮರಿಸಿದರು.

ದಾವಣಗೆರೆಗೆ ಭೇಟಿ ನೀಡಿದಾಗಲೆಲ್ಲ ಅವರ ಗೆಸ್ಟ್ ಹೌಸ್ ನಲ್ಲಿ ಉಳಿಯುತ್ತಿದ್ದು, ಅವರ ಒತ್ತಾಯದ ಮೇರೆಗೆ ಅವರ ಮನೆಯಲ್ಲಿಯೇ ಊಟ ಮಾಡುತ್ತಿದ್ದೆ. ಅಲ್ಲದೇ ತಮ್ಮ 75ನೇ ಜನ್ಮದಿನವನ್ನು ದಾವಣಗೆರೆಯಲ್ಲಿಯೇ ಆಚರಿಸಿಕೊಂಡಿದ್ದನ್ನು ಸಿಎಂ ಇದೇ ಸಂದರ್ಭದಲ್ಲಿ ನೆನಪಿಸಿಕೊಂಡರು.

ಶ್ಯಾಮನೂರು ಶಿವಶಂಕರಪ್ಪ ಕಷ್ಟದ ಸಂದರ್ಭಗಳಲ್ಲಿ ಜನರಿಗೆ ಸಹಾಯಹಸ್ತ ಚಾಚುತ್ತಿದ್ದರು. ಕೋವಿಡ್ ಸಂದರ್ಭದಲ್ಲಿ ಸ್ವಂತವಾಗಿ ಆರು ಕೋಟಿಗೂ ಹೆಚ್ಚು ವೆಚ್ಚ ಮಾಡಿ ಆಕ್ಸಿಜನ್ ಸರಬರಾಜು ಮಾಡಿದ್ದರು.

15 ದಿನಗಳ ಹಿಂದೆ ಆಸ್ಪತ್ರೆಯಲ್ಲಿ ಅವರನ್ನು ಭೇಟಿ ಮಾಡಿದಾಗ ಮಾತನಾಡುವ ಸ್ಥಿತಿಯಲ್ಲಿ ಇರಲಿಲ್ಲ. ಅವರ ನಿಧನದಿಂದ ಜನಪರ ನಾಯಕನನ್ನು ಕಳೆದುಕೊಂಡಿದ್ದೇವೆ. ಅವರು ದೊಡ್ಡ ಕುಟುಂಬ ಹಾಗೂ ಲಕ್ಷಾಂತರ ಅಭಿಮಾನಿಗಳನ್ನು ಅಗಲಿದ್ದು ಭಗವಂತ ಅವರಿಗೆ ದುಃಖ ಭರಿಸುವ ಶಕ್ತಿಯನ್ನು ನೀಡಲಿ ಹಾಗೂ ಅವರ ಆತ್ಮಕ್ಕೆ ಚಿರಶಾಂತಿ ನೀಡಲಿ ಎಂದು ಸಂತಾಪ ವ್ಯಕ್ತಪಡಿಸಿದರು.

For Latest News Updates, Join Our Whatsapp Community🚩
RELATED ARTICLES

Most Popular