ಬೆಳಗಾವಿ: ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ತೆಲಸಂಗ ಗ್ರಾಮದಲ್ಲಿ ವ್ಯಕ್ತಿಯೊಬ್ಬ ಪತ್ನಿಯ ಕುಟುಂಬದ ಆರು ಜನರ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಕೊಲೆಗೆ ಯತ್ನಿಸಿದ್ದಾನೆ. ಡಿಸೆಂಬರ್ 10ರಂದು ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಗಂಡನ ಕಿರುಕುಳಕ್ಕೆ ಬೇಸತ್ತ ಪತ್ನಿ ತವರು ಮನೆಗೆ ಬಂದಿದ್ದು, ಆಕೆಯ ಕುಟುಂಬದ ಆರು ಮಂದಿ ಮೇಲೆ ಪತಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ. ಅಥಣಿ ತಾಲೂಕಿನ ಯಲಿಹಡಲಗಿ ಗ್ರಾಮದ ನಿವಾಸಿ ಭೀಮ ಭೋಸಲೆ ಕೃತ್ಯ ಎಸಗಿದ ಆರೋಪಿ. ಆತನ ಪತ್ನಿ ರಾಣಿ ಪತಿ ಮನೆಯಲ್ಲಿ ನಡೆಯುತ್ತಿದ್ದ ನಿರಂತರ ಜಗಳ ಮತ್ತು ಕಿರುಕುಳ ಸಹಿಸದೆ ತೆಲಸಂಗ ಗ್ರಾಮದ ತನ್ನ ತವರು ಮನೆಗೆ ಆಗಮಿಸಿದ್ದಾರೆ.
ಇದರಿಂದ ಸಿಟ್ಟಿಗೆದ್ದ ಆರೋಪಿ ಭೀಮ ಪತ್ನಿಯ ಕುಟುಂಬದವರ ಮೇಲೆ ಆಕ್ರೋಶಗೊಂಡು ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ. ರಾಣಿ, ಸಂಜು, ಶಂಕರ, ಕೃಷ್ಣ ಸೇರಿದಂತೆ ಆರು ಮಂದಿಗೆ ತೀವ್ರ ಸುಟ್ಟ ಗಾಯಗಳಾಗಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಅವರನ್ನು ವಿಜಯಪುರದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಐಗಳಿ ಪೊಲೀಸ್ ಠಾಣೆಯಲ್ಲಿ ಕೊಲೆ ಯತ್ನ ಪ್ರಕರಣ ದಾಖಲಾಗಿದೆ.

