GOOD NEWS : ರಾಜ್ಯದ ರೈತರಿಗೆ ಗುಡ್ ನ್ಯೂಸ್ : ಸರ್ಕಾರದಿಂದ ಸಿಗಲಿದೆ ಈ ಯೋಜನೆ, ಸೌಲಭ್ಯಗಳು.!

ಬೆಂಗಳೂರು : ರೈತರ ಅನುಕೂಲಕ್ಕಾಗಿ ರಾಜ್ಯ ಸರ್ಕಾರ ವಿವಿಧ ಯೋಜನೆ / ಕಾರ್ಯಕ್ರಮಗಳನ್ನು ಅನುಷ್ಠಾನ ಮಾಡುತ್ತಿದೆ. ಈ ಕುರಿತು ಇಲ್ಲಿದೆ ಸಂಪೂರ್ಣ ಮಾಹಿತಿ. ಬೀಜಗಳ ಪೂರೈಕೆ ಹಾಗೂ ಕೃಷಿ ಯಾಂತ್ರೀಕರಣ , ಕೃಷಿ ಸಂಸ್ಕರಣೆ, ಸೂಕ್ಷ್ಮ ನೀರಾವರಿ ಸೇರಿದಂತೆ ಹಲವು ಸೌಲಭ್ಯಗಳನ್ನ ಸರ್ಕಾರ ನೀಡುತ್ತಿದೆ.

ರಾಜ್ಯದ ಎಲ್ಲಾ ವರ್ಗದ ರೈತರಿಗೆ ವಿವಿಧ ಕೃಷಿ ಬೆಳೆಗಳ ಪ್ರಮಾಣಿತ/ ನಿಜ ಚೀಟಿ ಬಿತ್ತನೆ ಬೀಜಗಳನ್ನು ಸಾಮಾನ್ಯ ವರ್ಗದ ರೈತರಿಗೆ ಶೇ. 50 ಹಾಗೂ ಪರಿಶಿಷ್ಟ ಜಾತಿ/ ಪಂಗಡದ ರೈತರಿಗೆ ಶೇ.75 ರ ರಿಯಾಯಿತಿ ದರದಲ್ಲಿ ವಿತರಣೆ ಮಾಡಲಾಗುತ್ತಿದೆ.

ಕೃಷಿ ಯಾಂತ್ರೀಕರಣ: ರೈತರು ಸಕಾಲದಲ್ಲಿ ಕೃಷಿ ಚಟುವಟಿಕೆಗಳನ್ನು ಕೈಗೊಳ್ಳುವುದಕ್ಕೆ ಅನುವು ಮಾಡಿಕೊಡಲು ಹಾಗೂ ಕೂಲಿ ಕಾರ್ಮಿಕರ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಲು, ಸದರಿ ಕೃಷಿ ಯಾಂತ್ರೀಕರಣ ಯೋಜನೆಯಡಿ ಕೃಷಿ ಯಂತ್ರೋಪಕರಣಗಳಿಗೆ ಸಾಮಾನ್ಯ ವರ್ಗದ ರೈತರಿಗೆ ಶೇ.50 ಹಾಗೂ ಪ.ಜಾ./ಪ.ಪಂ. ರೈತರಿಗೆ ಶೇ.90 ರಂತೆ ಎಲ್ಲಾ ವರ್ಗದ ರೈತರಿಗೆ ಗರಿಷ್ಠ ರೂ.1.00 ಲಕ್ಷಕ್ಕೆ ಮಿತಿಗೊಳಪಟ್ಟು ಸಹಾಯಧನವನ್ನು ಒದಗಿಸಲಾಗುತ್ತಿದೆ ಹಾಗೂ 45 ಪಿ.ಟಿ.ಒ ಹೆಚ್.ಪಿ ವರೆಗಿನ ಟ್ರಾಕ್ಟರ್ ಳಿಗೆ ಸಾಮಾನ್ಯ ವರ್ಗದ ರೈತರಿಗೆ ರೂ.0.75 ಲಕ್ಷ ಹಾಗೂ ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡದ ರೈತರಿಗೆ ಶೇ.90 ರ ಗರಿಷ್ಠ ರೂ.3.00 ಲಕ್ಷ ಸಹಾಯಧನ ನೀಡಲಾಗುತ್ತಿದೆ.

ಕೃಷಿ ಸಂಸ್ಕರಣೆ: ಕೃಷಿ ಉತ್ಪನ್ನಗಳ ಸಂಸ್ಕರಣೆ ಯೋಜನೆಯಡಿ ಕೃಷಿ ಸಂಸ್ಕರಣಾ ಘಟಕಗಳು, ಟಾರ್ಪಾಲಿನ್ ಮತ್ತು ಸಣ್ಣ ಯಂತ್ರಚಾಲಿತ ಎಣ್ಣೆಗಾಣ ಘಟಕಗಳನ್ನು ಸಹಾಯಧನದಡಿ ರೈತರಿಗೆ ವಿತರಿಸಲಾಗುತ್ತಿದೆ. ಸದರಿ ಯೋಜನೆಯಡಿ ಕೃಷಿ ಸಂಸ್ಕರಣಾ ಘಟಕಗಳು ಮತ್ತು ಟಾರ್ಪಾಲಿನ್ ಗಳನ್ನು ಸಾಮಾನ್ಯ ವರ್ಗದ ರೈತರಿಗೆ ಶೇ.50ರಷ್ಟು ಮತ್ತು ಪರಿಶಿಷ್ಟ ಜಾತಿ/ ಪಂಗಡದ ರೈತರಿಗೆ ಶೇ.90ರಷ್ಟು ಸಹಾಯಧನದಡಿ ನೀಡಲಾಗುವುದು. ಸಣ್ಣ ಯಂತ್ರಚಾಲಿತ ಎಣ್ಣೆಗಾಣ ಘಟಕಗಳನ್ನು ಸಾಮಾನ್ಯ ವರ್ಗದ ರೈತರಿಗೆ ಶೇ.75 ಹಾಗೂ ಪ.ಜಾ./ಪ.ಪಂ., ರೈತರಿಗೆ ಶೇ.90 ರಂತೆ ಎಲ್ಲಾ ವರ್ಗದ ರೈತರಿಗೆ ಗರಿಷ್ಠ ರೂ.1.00 ಲಕ್ಷಕ್ಕೆ ಮಿತಿಗೊಳಪಟ್ಟು ಸಹಾಯಧನವನ್ನು ಒದಗಿಸಲಾಗುತ್ತಿದೆ.

ಸೂಕ್ಷ್ಮ ನೀರಾವರಿ: ಕೇಂದ್ರ ಪುರಸ್ಕೃತ ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆಯ ಮಾರ್ಗಸೂಚಿ ಅನ್ವಯ ಸಣ್ಣ / ಅತಿ ಸಣ್ಣ ರೈತರಿಗೆ ಶೇ.55 ಮತ್ತು ಇತರೇ ವರ್ಗದ ರೈತರಿಗೆ ಶೇ.45 ರಷ್ಟು ಸಹಾಯಧನವನ್ನು ಪ್ರತಿಯೊಬ್ಬ ರೈತರಿಗೆ ಗರಿಷ್ಠ 5.0 ಹೆಕ್ಟೇರ್ ಪ್ರದೇಶದವರೆಗೆ ನೀಡಲು ಅವಕಾಶವಿರುತ್ತದೆ. ಇದರಲ್ಲಿ, ಕೇಂದ್ರ ಮತ್ತು ರಾಜ್ಯ ಸರ್ಕಾರದ ಪಾಲು 60:40 ಇದ್ದು, ರಾಜ್ಯದಲ್ಲಿ ರಾಜ್ಯ ಸರ್ಕಾರದ ವತಿಯಿಂದ ರಾಜ್ಯದ ಪಾಲಿನ ಹೆಚ್ಚುವರಿ ಸಹಾಯಧನವನ್ನು ಸೇರಿಸಿ, ಎಲ್ಲಾ ವರ್ಗದ ರೈತರಿಗೆ ಸೂಕ್ಷ್ಮ ನೀರಾವರಿ ಘಟಕಗಳ ಅಳವಡಿಕೆಗೆ ಶೇ. 90ರ ಸಹಾಯಧನವನ್ನು ನೀಡಲಾಗುತ್ತಿದೆ.

ಸಸ್ಯ ಸಂರಕ್ಷಣೆ: ಶೇ.50ರ ರಿಯಾಯಿತಿ ದರದಲ್ಲಿ ಪೀಡೆನಾಶಕ/ ಜೈವಿಕ ಪೀಡೆನಾಶಕ ಹಾಗೂ ಜೈವಿಕ ನಿಯಂತ್ರಣಕಾರಕಗಳ ವಿತರಣೆ ಮಾಡಲಾಗುತ್ತಿದೆ.

ರೈತ ಸಿರಿ ಕಾರ್ಯಕ್ರಮದಡಿ ರಾಜ್ಯದಲ್ಲಿ ಸಿರಿಧಾನ್ಯಗಳ ಉತ್ಪಾದನೆಯನ್ನು ಪ್ರೋತ್ಸಾಹಿಸಲು ಮತ್ತು ರೈತರ ಆದಾಯವನ್ನು ಹೆಚ್ಚಿಸಲು ಸಿರಿಧಾನ್ಯಗಳಾದ ನವಣೆ, ಹಾರಕ, ಕೊರಲೆ, ಸಾಮೆ, ಊದಲು, ಬರಗು ಬೆಳೆಗಳನ್ನು ಬೆಳೆದ ಎಲ್ಲಾ ವರ್ಗದ ರೈತರಿಗೆ ಪ್ರತಿ ಹೆಕ್ಟೇರಿಗೆ ರೂ.10000/-ದಂತೆ ಗರಿಷ್ಠ ಎರಡು ಹೆಕ್ಟೇರ್ ಪ್ರದೇಶದಲ್ಲಿ ಸಿರಿಧಾನ್ಯಗಳನ್ನು ಬೆಳೆದ ಎಲ್ಲಾ ರೈತರುಗಳಿಗೆ ಬೆಳೆ ಸಮೀಕ್ಷೆ ಆಧಾರದಂತೆ ಪ್ರೋತ್ಸಾಹಧನವನ್ನು ನೇರ ನಗದು ವರ್ಗಾವಣೆ ಮೂಲಕ ನೀಡಲಾಗುವುದು.

ಸಾವಯವ ಇಂಗಾಲ ಅಭಿಯಾನ: ರಾಜ್ಯದ ಕೃಷಿ ಭೂಮಿಯಲ್ಲಿ ಸಾವಯವ
ಇಂಗಾಲದ ಪ್ರಮಾಣವನ್ನು ಹೆಚ್ಚಿಸಲು, ದ್ವಿದಳಧಾನ್ಯಗಳ ವಿಸ್ತೀರ್ಣ ಮತ್ತು ಉತ್ಪಾದನೆ ಹೆಚ್ಚಿಸುವ ಸಲುವಾಗಿ ಶೇ. 75ರ ರಿಯಾಯಿತಿ ದರದಲ್ಲಿ ಹಸಿರೆಲೆ ಗೊಬ್ಬರ ಬಿತ್ತನೆ ಬೀಜಗಳ ವಿತರಣೆ ಮಾಡಲಾಗುವುದು.
ಬೆಂಬಲ ಬೆಲೆ: ಕೇಂದ್ರ ಸರ್ಕಾರವು ಪ್ರತಿ ವರ್ಷ ಮುಂಗಾರು ಹಾಗು ಹಿಂಗಾರು
ಹಂಗಾಮಿಗೆ ಮುಂಚಿತವಾಗಿ ಬೆಂಬಲ ಬೆಲೆ ಘೋಷಣೆ ಮಾಡುತ್ತಿದ್ದು, ಸಗಟು ಮಾರುಕಟ್ಟೆಯಲ್ಲಿ ಬೆಂಬಲ ಬೆಲೆಗಿಂತ ಕಡಿಮೆ ಬೆಲೆಯಲ್ಲಿ ಮಾರಾಟವಾಗುವ ಸಂದರ್ಭಗಳಲ್ಲಿ ಬೆಂಬಲ ಬೆಲೆಯಲ್ಲಿ ರೈತರಿಂದ ಉತ್ಪನ್ನಗಳನ್ನು ಖರೀದಿಸಲಾಗುತ್ತಿದೆ. ಅಲ್ಲದೆ, ಅವಶ್ಯಕ ಸಂದರ್ಭಗಳಲ್ಲಿ ಕೇಂದ್ರ ಸರ್ಕಾರ ಘೋಷಿಸಿದ ಬೆಂಬಲ ಬೆಲೆಯ ಜೊತಗೆ ರಾಜ್ಯ ಸರ್ಕಾರದ ಪ್ರೋತ್ಸಾಹಧನವನ್ನೂ ಸಹ ನೀಡಲಾಗುತ್ತಿದೆ.

ಹೊಸ ಬೆಳೆ ವಿಮಾ ಯೋಜನೆ: ಈ ಯೋಜನೆಯಡಿ ಪಕೃತಿ ವಿಕೋಪಗಳು, ಕೀಟಗಳು ಮತ್ತು ರೋಗಗಳಿಂದಾಗಿ ಯಾವುದೇ ಅಧಿಸೂಚಿತ ಬೆಳೆ ವಿಫಲವಾದ ಪಕ್ಷದಲ್ಲಿ ರೈತರಿಗೆ ವಿಮಾ ರಕ್ಷಣೆ ಮತ್ತು ಹಣಕಾಸು ಬೆಂಬಲ ನೀಡಲಾಗುವುದು. ರೈತರಿಗೆ ನೀಡುವ ವಿಮಾ ಕಂತಿನ ರಿಯಾಯಿತಿಯಲ್ಲಿ ರಾಜ್ಯ ಸರ್ಕಾರದ ಪಾಲನ್ನು ನೀಡಿ ಬೆಳೆ ವಿಮಾ ನಷ್ಟ ಪರಿಹಾರವನ್ನು ಇತ್ಯರ್ಥಪಡಿಸಲು ಅನುವು ಮಾಡಲಾಗುತ್ತಿದೆ.

ಪಿ.ಎಂ.ಕಿಸಾನ್ ಯೋಜನೆ: ಈ ಯೋಜನೆಯಡಿ ಕೇಂದ್ರ ಸರ್ಕಾರದಿಂದ ಎಲ್ಲಾ ಅರ್ಹ ರೈತ ಕುಟುಂಬಗಳಿಗೆ ರೂ.6000 ಗಳನ್ನು 3 ಕಂತುಗಳಲ್ಲಿ ನೇರವಾಗಿ ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡಲಾಗುತ್ತದೆ.

ಬೆಳೆ ಪರಿಹಾರ: ಪ್ರಾಕೃತಿಕ ವಿಕೋಪಗಳಿಂದ ಬೆಳೆಹಾನಿ ಸಂಭವಿಸಿದಲ್ಲಿ, ರಾಷ್ಟ್ರ ಹಾಗೂ ರಾಜ್ಯ ಪ್ರಕೃತಿ ವಿಕೋಪ ಪರಿಹಾರ ನಿಧಿಯಿಂದ ರೈತರಿಗೆ ಪರಿಹಾರ ನೀಡಲಾಗುತ್ತಿದೆ.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read