ನವದೆಹಲಿ: ಕಾಂಗ್ರೆಸ್ ಹೈಕಮಾಂಡ್ ಗೆ 500 ಕೋಟಿ ರೂ. ಇರುವ ಸೂಟ್ ಕೇಸ್ ಕೊಡುವವರು ಮುಖ್ಯಮಂತ್ರಿ ಅಭ್ಯರ್ಥಿ ಆಗುತ್ತಾರೆ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದ ಪಂಜಾಬ್ ಮಾಜಿ ಉಪಮುಖ್ಯಮಂತ್ರಿ ನವಜೋತ್ ಸಿಂಗ್ ಸಿಧು ಅವರ ಪತ್ನಿ ಹಾಗೂ ಮಾಜಿ ಶಾಸಕಿ ನವಜೋತ್ ಕೌರ್ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಕಾಂಗ್ರೆಸ್ ಪಕ್ಷದಿಂದ ಅಮಾನತುಗೊಳಿಸಲಾಗಿದೆ.
ಡಾ. ನವಜೋತ್ ಕೌರ್ ಸಿಧು ಅವರನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಲಾಗಿದೆ ಎಂದು ಪಂಜಾಬ್ ಕಾಂಗ್ರೆಸ್ ಮುಖ್ಯಸ್ಥ ಅಮರಿಂದರ್ ಸಿಂಗ್ ರಾಜಾ ವಾರಿಂಗ್ ಆದೇಶದಲ್ಲಿ ತಿಳಿಸಿದ್ದಾರೆ.
500 ಕೋಟಿ ರೂ. ಸೂಟ್‌ಕೇಸ್ ನೀಡುವವನು ಪಂಜಾಬ್‌ನಲ್ಲಿ ಸಿಎಂ ಆಗುತ್ತಾನೆ ಎಂದು ನವಜೋತ್ ಕೌರ್ ಸಿಧು ವಿವಾದಾತ್ಮಕ ಹೇಳಿಕೆ ನೀಡಿದ ಕೆಲವೇ ಗಂಟೆಗಳ ನಂತರ ಕ್ರಮ ಕೈಗೊಳ್ಳಲಾಗಿದೆ.
ರಾಜಕೀಯ ವಿವಾದದ ನಂತರ ನವಜೋತ್ ಕೌರ್ ಸ್ಪಷ್ಟನೆ
ತಮ್ಮ ಹೇಳಿಕೆಗಳ ಕುರಿತು ರಾಜಕೀಯ ವಿವಾದ ಭುಗಿಲೆದ್ದ ನಂತರ, ಅವರ ನೇರ ಹೇಳಿಕೆಗೆ ತಿರುವು ನೀಡಲಾಗಿದೆ ಎಂದು ನವಜೋತ್ ಕೌರ್ ಹೇಳಿದ್ದಾರೆ.
ಕಾಂಗ್ರೆಸ್ ನಮ್ಮಿಂದ ಏನನ್ನೂ ಬೇಡಿಕೊಂಡಿಲ್ಲ ಎಂಬ ನೇರ ಕಾಮೆಂಟ್‌ಗೆ ನೀಡಲಾದ ತಿರುವು ನೋಡಿ ನನಗೆ ಆಘಾತವಾಯಿತು. ನವಜೋತ್ ಬೇರೆ ಯಾವುದೇ ಪಕ್ಷದಿಂದ ಮುಖ್ಯಮಂತ್ರಿ ಅಭ್ಯರ್ಥಿಯಾಗುವ ಬಗ್ಗೆ ಕೇಳಿದಾಗ, ಸಿಎಂ ಹುದ್ದೆಗೆ ನೀಡಲು ನಮ್ಮಲ್ಲಿ ಹಣವಿಲ್ಲ ಎಂದು ನಾನು ಹೇಳಿದೆ ಎಂದು ಕೌರ್ ಹೇಳಿದ್ದಾರೆ.
— Amarinder Singh Raja Warring (@RajaBrar_INC) December 8, 2025
