BIG NEWS: ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಟ್ರಾಫಿಕ್ ನಿಯಂತ್ರಿಸಲು ಹೊಸ ನಿಯಮ ಜಾರಿ

ಬೆಂಗಳೂರು: ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಬೆಂಗಳೂರು ಪ್ರಯಾಣಿಕರ ಸಂಚಾರವನ್ನು ಸುಗಮಗೊಳಿಸಲು, ಸಂಚಾರ ದಟ್ಟಣೆ ನಿಯಂತ್ರಣ ಮಾಡಲು ಡಿಸೆಂಬರ್ 8ರಿಂದ ವರ್ಧಿತ ಪಿಕಪ್ ನಿಯಮಗಳನ್ನು ಪರಿಚಯಿಸುತ್ತಿದೆ.

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಬೆಂಗಳೂರು ವೇಗವಾಗಿ ಬೆಳೆಯುತ್ತಿರುವ, ಭಾರತದ ಮೂರನೇ ಅತಿದೊಡ್ಡ ವಿಮಾನ ನಿಲ್ದಾಣವಾಗಿದ್ದು, ಪ್ರತಿದಿನ ಸುಮಾರು 130,000 ಪ್ರಯಾಣಿಕರಿಗೆ ಸೇವೆ ಸಲ್ಲಿಸುತ್ತಿದೆ. ವಿಮಾನ ನಿಲ್ದಾಣದಲ್ಲಿನ ರಸ್ತೆ ಮಾರ್ಗದಲ್ಲಿ ಸುಮಾರು 100,000 ವಾಹನಗಳು ಪ್ರತಿನಿತ್ಯ ಸಂಚರಿಸುತ್ತಿವೆ. ವಿಶೇಷವಾಗಿ ಟರ್ಮಿನಲ್‌ಗಳ ಮುಂಭಾಗ ಇರುವ ಕರ್ಬ್‌ಸೈಡ್‌ನಲ್ಲಿ (ಡ್ರಾಪ್-ಆಫ್ ಮತ್ತು ಪಿಕ್-ಅಪ್ ಮಾರ್ಗಗಳು) ಸಂಚಾರ ದಟ್ಟಣೆ ಉಂಟಾಗುತ್ತಿದೆ. ಈ ಹಿನ್ನೆಲೆಯಲ್ಲಿ ವಿಮಾನ ನಿಲ್ದಾಣವು ಸಂಚಾರ ದಟ್ಟಣೆ ಸರಾಗಗೊಳಿಸುವ ನಿಟ್ಟಿನಲ್ಲಿ ಈ ಕ್ರಮಕ್ಕೆ ಮುಂದಾಗಿದೆ.

ಈ ಭಾಗದಲ್ಲಿ ವಿಮಾನ ನಿಲ್ದಾಣಕ್ಕೆ ಬರುವ ಖಾಸಗಿ ಕಾರುಗಳು ಮತ್ತು ಕ್ಯಾಬ್‌ಗಳು ಪಥಗಳಲ್ಲಿ ದೀರ್ಘಕಾಲ ಕಾಯುವಿಕೆಯಿಂದ ಕೃತಕ ದಟ್ಟಣೆ ಉಂಟಾಗುತ್ತಿದೆ. ಇದರಿಂದ ಇತರೆ ವಾಹನಗಳ ಸಂಚಾರಕ್ಕೂ ಅಡ್ಡಿ ಉಂಟಾಗುತ್ತಿದೆ. ಇದರಿಂದ ಕಾಲ್ನಡಿಗೆಯಿಂದ ವಿಮಾನ ನಿಲ್ದಾಣ ಪ್ರವೇಶಿಸುವ ಪ್ರಯಾಣಿಕರು ಮತ್ತು ಚಾಲಕರಿಗೆ ಅನಾನುಕೂಲವಾಗುತ್ತಿದೆ. ಇದನ್ನು ಪರಿಹರಿಸಲು ಮತ್ತು ಪ್ರಯಾಣಿಕರ ಅನುಕೂಲಕ್ಕಾಗಿ ಬಿಐಎಎಲ್‌ ಶಿಸ್ತುಬದ್ಧ ನಿಯಮ ಜಾರಿಗೊಳಿಸುತ್ತಿದೆ. ಅನಧಿಕೃತ ಪಾರ್ಕಿಂಗ್ ತಡೆಯಲು ಮತ್ತು ಕಾಯುವಿಕೆಯ ಸಮಯವನ್ನು ಕಡಿಮೆ ಮಾಡಲು ಪ್ರತ್ಯೇಕ ಪಥ ವ್ಯವಸ್ಥೆಯನ್ನು ಪರಿಚಯಿಸುತ್ತಿದೆ.

ಹೊಸ ಪ್ರತ್ಯೇಕ ಪಥ ವ್ಯವಸ್ಥೆಯ ಪ್ರಕಾರ, ಟಿ1 ಮತ್ತು ಟಿ2 ನಲ್ಲಿ ನಿಗದಿಪಡಿಸಿದ ಆಗಮನ ಪಿಕ್-ಅಪ್ ವಲಯಕ್ಕೆ ಎಲ್ಲಾ ಖಾಸಗಿ ಕಾರುಗಳಿಗೆ (ಬಿಳಿ ಬೋರ್ಡ್) ಪ್ರವೇಶ ಉಚಿತವಾಗಿರುತ್ತದೆ. ಆದರೆ ನಿಗದಿತ ಸಮಯ ಮಿತಿಯನ್ನು ಮೀರಿದರೆ ಅಂತಹ ವಾಹನಗಳ ಮೇಲೆ ಹೆಚ್ಚು ಕಾಲ ನಿಲ್ಲಿಸಿ, ಅವಕಾಶವನ್ನು ದುರ್ಬಳಕೆ ಮಾಡಿಕೊಂಡಿದ್ದಕ್ಕಾಗಿ ಪ್ರತ್ಯೇಕ ಶುಲ್ಕ ವಿಧಿಸಲಾಗುತ್ತದೆ. ವಿಮಾನ ನಿಲ್ದಾಣವು ವಲಯದ ಉಚಿತ ವಾಹನ‌ ನಿಲುಗಡೆಯ ಅವಕಾಶವನ್ನು 8 ನಿಮಿಷಗಳ ಕಾಲ ನೀಡುತ್ತದೆ. ಅದನ್ನು ಮೀರಿದ ಎಲ್ಲಾ ವಾಹನ ಬಳಕೆದಾರರಿಗೆ 8-13 ನಿಮಿಷಗಳ ಕಾಲ ಉಳಿಯಲು ರೂ.150/- ಶುಲ್ಕ ಮತ್ತು 13-18 ನಿಮಿಷಗಳಿಗೆ ರೂ.300/- ಶುಲ್ಕ ವಿಧಿಸಲಾಗುತ್ತದೆ. 18 ನಿಮಿಷಗಳಿಗಿಂತ ಹೆಚ್ಚು ಕಾಲ ವಾಹನ ನಿಲ್ಲಿಸಿದರೆ ಹತ್ತಿರದ ಪೊಲೀಸ್ ಠಾಣೆಗೆ ಟೋಯಿಂಗ್‌ ಮಾಡಲಾಗುತ್ತದೆ. ಇಲ್ಲಿ, ಅನ್ವಯವಾಗುವ ದಂಡ ಮತ್ತು ಟೋಯಿಂಗ್ ಶುಲ್ಕವನ್ನು ವಿಧಿಸುವುದು ಅನಿವಾರ್ಯವಾಗಿದೆ.

ಹಳದಿ ಬೋರ್ಡ್ ಟ್ಯಾಕ್ಸಿ ಮತ್ತು ಎಲೆಕ್ಟ್ರಿಕ್ ಕ್ಯಾಬ್‌ಗಳು ಸೇರಿದಂತೆ ಎಲ್ಲಾ ವಾಣಿಜ್ಯ ವಾಹನಗಳು ನಿಗದಿಪಡಿಸಿದ ಪಾರ್ಕಿಂಗ್ ವಲಯಗಳಲ್ಲಿ ಮಾತ್ರ ಪ್ರಯಾಣಿಕರಿಗಾಗಿ ಕಾಯಬೇಕಾಗುತ್ತದೆ. ಸುಗಮ ಪಿಕ್-ಅಪ್ ಅನುಭವವನ್ನು ಒದಗಿಸಲು, ಪಾರ್ಕಿಂಗ್‌ನ ಮೊದಲ 10 ನಿಮಿಷಗಳು ಉಚಿತವಾಗಿರುತ್ತವೆ. ಟರ್ಮಿನಲ್ 1 ಕ್ಕೆ ಆಗಮಿಸುವ ವಾಣಿಜ್ಯ ವಾಹನಗಳು ಪಿ4 ಮತ್ತು ಪಿ3 ಪಾರ್ಕಿಂಗ್ ವಲಯಗಳಿಗೆ ತೆರಳಬೇಕು. ಆದರೆ ಟರ್ಮಿನಲ್ 2 ಗೆ ಸೇವೆ ಸಲ್ಲಿಸುವ ವಾಹನಗಳನ್ನು ಪಿ2 ಪಾರ್ಕಿಂಗ್ ವಲಯಕ್ಕೆ ತೆರಳಬೇಕಾಗುತ್ತದೆ.

ಈ ಬಗ್ಗೆ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿಯಮಿತದ (ಬಿಐಎಎಲ್‌) ಎಂ.ಡಿ. ಮತ್ತು ಸಿಇಒ ಹರಿ ಮರಾರ್ ಮಾಹಿತಿ ನೀಡಿದ್ದು, ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚುತ್ತಿದೆ. ಪಿಕ್-ಅಪ್ ವಲಯಗಳಲ್ಲಿ ಶಿಸ್ತು ಕಾಪಾಡಿಕೊಳ್ಳುವುದು ಅತ್ಯಗತ್ಯ. ಹೊಸ ನಿಯಮ ಪ್ರಯಾಣಿಕರ ಸುರಕ್ಷತೆ, ಸುಗಮ ಆಗಮನ ಹಾಗೂ ನಿರ್ಗಮನಕ್ಕೆ ಸಹಕಾರಿಯಾಗಲಿದೆ. ಪ್ರಯಾಣಿಕರು ಮತ್ತು ಕ್ಯಾಬ್ ಚಾಲಕರು ಹೊಸ ಪ್ರಕ್ರಿಯೆಯನ್ನು ಅನುಸರಿಸಿದಾಗ, ಅನುಭವವು ತ್ವರಿತ, ಸುರಕ್ಷಿತ ಮತ್ತು ಈ ಭಾಗದಲ್ಲಿ ಓಡಾಡುವ ಎಲ್ಲರಿಗೂ ಹೆಚ್ಚು ಅನುಕೂಲಕರವಾಗುತ್ತದೆ. ವಿಮಾನ ನಿಲ್ದಾಣದ ಅನುಭವವನ್ನು ಸುಗಮ ಮತ್ತು ಉತ್ತಮವಾಗಿ ಸಂಘಟಿತವಾಗಿಸುವಲ್ಲಿ ಎಲ್ಲರ ಸಹಕಾರ ಅಗತ್ಯ ಎಂದರು.

ಇತ್ತೀಚಿನ ದಿನಗಳಲ್ಲಿ, ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಬೆಂಗಳೂರಿನಲ್ಲಿ ಅನಧಿಕೃತ ಕ್ಯಾಬ್‌ಗಳು, ಆಗಮನದ ದ್ವಾರ ಹಾಗೂ ನಿರ್ಗಮನ ರ‍್ಯಾಂಪ್‌ಗಳ ಹೊರಗೆ ದೀರ್ಘಕಾಲದ ನಿಲುಗಡೆಯಿಂದ ಹಾಗೂ ರಸ್ತೆಬದಿಯಲ್ಲೇ ಪಿಕ್-ಅಪ್‌ ಮಾಡಿಕೊಳ್ಳುತ್ತಿರುವುದರಿಂದ ವಾಹನ ದಟ್ಟಣೆ ಪ್ರಮಾಣ ಹೆಚ್ಚುತ್ತಲೇ ಇತ್ತು. ಈ ನಡವಳಿಕೆಗಳು ಹೆಚ್ಚಾಗಿ ಜನದಟ್ಟಣೆ, ಪ್ರಯಾಣಿಕರ ಅನಾನುಕೂಲತೆ ಮತ್ತು ತಪ್ಪಿಸಬಹುದಾದ ವಿಳಂಬಗಳಿಗೆ ಕಾರಣವಾಗುತ್ತಿವೆ, ಜೊತೆಗೆ ಸುರಕ್ಷತಾ ಅಪಾಯಗಳನ್ನು ಉಂಟುಮಾಡುತ್ತಿದ್ದು. ಹೀಗಾಗಿ, ಸುಗಮ ಮತ್ತು ಪ್ರಯಾಣಿಕ ಸ್ನೇಹಿ ಅನುಭವ ನೀಡಲು ಪ್ರಯಾಣಿಕರು ಮತ್ತು ಕ್ಯಾಬ್ ನಿರ್ವಾಹಕರು ನಿಗದಿಪಡಿಸಿದ ಪಿಕ್-ಅಪ್ ಪಾಯಿಂಟ್‌ಗಳು ಮತ್ತು ವಿಮಾನ ನಿಲ್ದಾಣ ಟ್ಯಾಕ್ಸಿ, ಉಬರ್, ಓಲಾ, ಕ್ವಿಕ್ ರೈಡ್, ಒಎಚ್‌ಎಂ ಎಲೆಕ್ಟ್ರಿಕ್ ಕ್ಯಾಬ್‌ಗಳು ಮತ್ತು ಡಬ್ಲ್ಯೂಟಿಐ ಕ್ಯಾಬ್‌ಗಳಂತಹ ಅಧಿಕೃತ ಪಿಕ್-ಅಪ್ ಪಾಯಿಂಟ್‌ಗಳನ್ನು ಮಾತ್ರ ಬಳಸಲು ಪ್ರೋತ್ಸಾಹಿಸಲಾಗುತ್ತದೆ. ಅನಧಿಕೃತ ಪ್ರದೇಶಗಳಲ್ಲಿ ನಿಲುಗಡೆ ಮಾಡುವುದು, ಪಥಗಳನ್ನು ನಿರ್ಬಂಧಿಸುವುದು ಅಥವಾ ಅನುಮತಿಸಲಾದ ಕಾಯುವ ಅವಧಿಯನ್ನು ಮೀರಿ ಉಳಿಯುವುದು ಸೇರಿದಂತೆ ಯಾವುದೇ ನಿಯಮ ಮೀರಿದ ನಡವಳಿಕೆಗೆ ದಂಡವನ್ನು ವಿಧಿಸಲು ಮುಂದಾಗಲಾಗಿದೆ. ಇದು ನಿಯಮ ಉಲ್ಲಂಘಿಸುವ ಎಲ್ಲಾ ಕ್ಯಾಬ್ ನಿರ್ವಾಹಕರು ಮತ್ತು ವ್ಯಕ್ತಿಗಳಿಗೆ ಅನ್ವಯಿಸಲಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read