ಬೆಂಗಳೂರು : ಪೌರಕಾರ್ಮಿಕರು, ಸ್ವಚ್ಛತಾ ವಾಹನ ಚಾಲಕರು ಮತ್ತು ಸಿಬ್ಬಂದಿಗಳಿಗೆ ದೂರು ನೀಡಿದರು ಎಂಬ ಕಾರಣಕ್ಕಾಗಿ ಕಿರುಕುಳ ಕೊಡುವುದನ್ನು ಸಹಿಸುವುದಿಲ್ಲ. ಅಂತಹ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ವಹಿಸಬೇಕು ಎಂದು ರಾಜ್ಯ ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷರಾದ ಪಿ ರಘು ಸೂಚಿಸಿದರು.
ಜಯನಗರದ ಕಮ್ಯುನಿಟಿ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಸಭಾಂಗಣದಲ್ಲಿ ಇಂದು ನಡೆದ ಬೆಂಗಳೂರು ದಕ್ಷಿಣ ನಗರ ಪಾಲಿಕೆ, ಗ್ರೇಟರ್ ಬೆಂಗಳೂರು ಪ್ರಾಧಿಕಾರ ವ್ಯಾಪ್ತಿಯ ಪೌರಕಾರ್ಮಿಕರು, ಲೋಡರ್ಸ್, ಕೀನರ್ಸ್ ಮತ್ತು ಚಾಲಕರೊಂದಿಗಿನ ನೇರ ಸಂವಾದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ನಗರದ ಸ್ವಚ್ಛತೆ, ಸೌಂದರ್ಯ ಹಾಗೂ ಆರೋಗ್ಯ ಕಾಪಾಡುವಲ್ಲಿ ಪ್ರತಿನಿತ್ಯ ಶ್ರಮಿಸುವ ಪೌರಕಾರ್ಮಿಕರು ಹಾಗೂ ಸ್ವಚ್ಛತಾ ಸಿಬ್ಬಂದಿಗಳನ್ನು ಶಿಸ್ತುಗೊಳಿಸುವುದು ಮಾತ್ರವಲ್ಲ, ಅವರಿಗೆ ಇರುವ ಸಮಸ್ಯೆಗಳನ್ನು ಆಲಿಸುವ ಹೃದಯವೂ ಸಹ ಅಧಿಕಾರಿಗಳಿಗೆ ಇರಬೇಕು. ಬದಲಾಗಿ ಆಯೋಗದ ಮುಂದೆ ಸಮಸ್ಯೆ ಹೇಳಿಕೊಂಡವರಿಗೆ ಅಧಿಕಾರಿಗಳು ಕಿರುಕುಳ ಕೊಡುವುದು ತಪ್ಪು. ಆ ರೀತಿ ತೊಂದರೆ ಕೊಟ್ಟಿರುವುದು ಕಂಡುಬಂದಲ್ಲಿ ಅಂಥ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಜರುಗಿಸುವಂತೆ ಅಧ್ಯಕ್ಷ ಪಿ ರಘು ಅವರು ದಕ್ಷಿಣ ಪಾಲಿಕೆ ಆಯುಕ್ತರಾದ ರಮೇಶ್ ಕೆ ಎನ್ ಅವರಿಗೆ ತಿಳಿಸಿದರು.
ಮಹಿಳಾ ಪೌರಕಾರ್ಮಿಕರಿಗಾಗಿ ಕುಡಿಯುವ ನೀರು ಹಾಗೂ ಶೌಚಾಲಯ ವ್ಯವಸ್ಥೆ ಒದಗಿಸಲು ಸುವಿಧಾ ಕ್ಯಾಬಿನ್ ಗಳನ್ನು ನಿರ್ಮಿಸಲು ಸ್ಥಳ ಗುರುತಿಸುವುದು, ಹಾಗೂ ಈಗಾಗಲೇ ಸುವಿಧಾ ಕ್ಯಾಬಿನ್ ಇರುವಲ್ಲಿ ಕುಡಿಯುವ ನೀರು ಹಾಗೂ ಶೌಚಾಲಯಕ್ಕೆ ನೀರಿನ ವ್ಯವಸ್ಥೆ ನಿರಂತರವಾಗಿ ದೊರೆಯುವಂತೆ ಸಂಬಂಧಪಟ್ಟ ಸಹಾಯಕ ಕಾರ್ಯಪಾಲಕ ಅಭಿಯಂತರರಿಗೆ ಅಧ್ಯಕ್ಷರು ಸೂಚಿಸಿದರು.
ಅಲ್ಲದೆ, ಭಾರತದ ಸರ್ವೋಚ್ಚ ನ್ಯಾಯಾಲಯದ ಆದೇಶದಂತೆ ಅವರ ಕಾರ್ಯವ್ಯಾಪ್ತಿಯಲ್ಲಿ ಇರುವ ಹೋಟೆಲ್ ಗಳಲ್ಲಿ ಮುಕ್ತವಾಗಿ ಶೌಚಾಲಯ ಬಳಸಲು ಹಾಗೂ ಕುಡಿಯುವ ನೀರು ಒದಗಿಸಲು ಖುದ್ದು ಭೇಟಿ ನೀಡಿ ಸೂಚಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಇದಕ್ಕೆ ಅಡ್ಡಿಪಡಿಸಿದಲ್ಲಿ ಅಂತಹ ಹೋಟೆಲ್ ಗಳ ವಿರುದ್ಧ ಕಾನೂನು ರೀತಿ ಕ್ರಮ ಜರುಗಿಸಲಾಗುವುದು ಎಂದು ಅವರು ಎಚ್ಚರಿಸಿದರು.
ಖಾಯಂ ನೇಮಕಾತಿ ಪತ್ರ ವಿತರಿಸಲು ಸಿಂಧುತ್ವ ಪ್ರಮಾಣ ಪತ್ರ ನೀಡಿದ ಮೇಲೆಯೂ ವಿಳಂಬವಾಗುತ್ತಿರುವ ಬಗ್ಗೆ ಪೌರಕಾರ್ಮಿಕರೊಬ್ಬರು ಅಹವಾಲು ಸಲ್ಲಿಸಿದರು. ಇದರಿಂದ ಹಲವು ತಿಂಗಳಿನ ವೇತನ ತಪ್ಪಿಹೋಗಿ ಆರ್ಥಿಕ ನಷ್ಟವಾಗುತ್ತಿದೆ ಎಂದ ಅವರು, ಕೆಲವರಿಗೆ ವೇತನದಲ್ಲಿ ಪೀ. ಎಫ್. ಕಟಾಯಿಸದೇ ಖಾಯಂ ನೌಕರಿ ಘೋಷಿಸಲು ತೊಂದರೆಯಾಗುತ್ತಿದೆ ಎಂದು ದೂರಿದರು.
ಇದಕ್ಕೆ ಪ್ರತಿಕ್ರಿಯಿಸಿದ ಆಯುಕ್ತ ರಮೇಶ್ ಅವರು ಅಗತ್ಯ ಅನುಮೋದನೆ ಪಡೆದಿರುವ ಎಲ್ಲ ಖಾಯಂ ಪೌರಕಾರ್ಮಿಕರಿಗೆ ಇನ್ನೊಂದು ವಾರದಲ್ಲಿ ನೇಮಕಾತಿ ಪತ್ರ ವಿತರಿಸುವುದಾಗಿ ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿ ಆಯೋಗದ ಸಂಶೋಧನಾಧಿಕಾರಿಗಳಾದ ಮಹದೇವಸ್ವಾಮಿ, ಬೆಂಗಳೂರು ದಕ್ಷಿಣ ನಗರ ಪಾಲಿಕೆಯ ಆಯುಕ್ತರಾದ ರಮೇಶ್ ಕೆ. ಎನ್, ಅಪರ ಆಯುಕ್ತರಾದ ರಾಚಪ್ಪ, ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿ ಆಯೋಗದ ಕಾರ್ಯದರ್ಶಿಗಳಾದ ಸುಮಯ್ಯ ರೂಹಿ, ಜಯನಗರ ವಲಯ 1 ಹಾಗೂ 2 ರ ಜಂಟಿ ಆಯುಕ್ತರಾದ ಮಧು ಪಟೇಲ್ ಹಾಗೂ ಸತೀಶ್ ಬಾಬು ಅವರು ಸೇರಿದಂತೆ ಪಾಲಿಕೆ ಅಧಿಕಾರಿಗಳು, ಸಿಬ್ಬಂದಿ ಹಾಗೂ ಪೌರಕಾರ್ಮಿಕರು ಉಪಸ್ಥಿತರಿದ್ದರು.
