ನವದೆಹಲಿ: ಆಹ್ವಾನವಿಲ್ಲದಿದ್ದರೂ ಊಟ ಮಾಡಲು ಮದುವೆ ಸಮಾರಂಭಕ್ಕೆ ಬಂದ 17 ವರ್ಷದ ಕೊಳಗೇರಿ ಯುವಕ ಗುಂಡೇಟಿಗೆ ಬಲಿಯಾಗಿದ್ದಾನೆ.
ದೆಹಲಿಯ ಶಾಹದರಾದಲ್ಲಿ ಸಿಐಎಸ್ಎಫ್ ಹೆಡ್ ಕಾನ್ಸ್ಟೇಬಲ್ ಗುಂಡಿಕ್ಕಿ ಯುವಕನನ್ನು ಕೊಂದಿದ್ದಾರೆ. ಮಾನಸ ಸರೋವರ ಪಾರ್ಕ್ ನ ಡಿಡಿಎ ಮಾರುಕಟ್ಟೆ ಸಮುದಾಯ ಕೇಂದ್ರದ ಬಳಿ ಶನಿವಾರ ಸಂಜೆ ನಡೆದ ಮದುವೆ ಸಮಾರಂಭದಲ್ಲಿ ಘಟನೆ ನಡೆದಿದೆ.
ಡಿಸಿಪಿ ಪ್ರಶಾಂತ್ ಗೌತಮ್ ಈ ಬಗ್ಗೆ ಮಾಹಿತಿ ನೀಡಿದ್ದು, ನ್ಯೂ ಮಾಡರ್ನ್ ಶಾಹದರಾ ನಿವಾಸಿಯಾಗಿರುವ ಯುವಕನಿಗೆ ಮದುವೆ ಸಮಾರಂಭದಲ್ಲಿ ಗುಂಡೇಟು ಬಿದ್ದಿದ್ದು, ಗಂಭೀರವಾಗಿ ಗಾಯಗೊಂಡಿದ್ದ ಆತನನ್ನು ಆಸ್ಪತ್ರೆಗೆ ದಾಖಲಿಸಿದಾ ಮೃತಪಟ್ಟಿದ್ದಾನೆ ಎಂದು ಹೇಳಿದ್ದಾರೆ.
ಆರೋಪಿಯನ್ನು ಉತ್ತರ ಪ್ರದೇಶದ ಕಾನ್ಪುರದ ಸಿಐಎಸ್ಎಫ್ ಹೆಡ್ ಕಾನ್ಸ್ಟೇಬಲ್ ಎಂದು ಗುರುತಿಸಿದ್ದು, ಆತನನ್ನು ಬಂಧಿಸಲಾಗಿದೆ. ಮದುವೆ ನಡೆಯುತ್ತಿರುವುದನ್ನು ನೋಡಿದ ಕೊಳಗೇರಿ ಯುವಕ ಊಟ ಮಾಡಲು ಅಲ್ಲಿಗೆ ಬಂದಿದ್ದಾನೆ. ಕಾಂಪೌಂಡ್ ಹಾರಿ ಬರುತ್ತಿದ್ದಂತೆ ಆತನನ್ನು ಸ್ಥಳದಲ್ಲಿದ್ದವರು ತಡೆದಿದ್ದು, ಅಲ್ಲಿದ್ದ ಕಾನ್ಸ್ಟೇಬಲ್ ಗುಂಡು ಹಾರಿಸಿದ್ದಾರೆ. ಇದರಿಂದಾಗಿ ಯುವಕ ಮೃತಪಟ್ಟಿದ್ದಾನೆ.
