ಬೆಂಗಳೂರು: ಭೂ ದಾಖಲೆಗಳ ನೋಂದಣಿ ಮತ್ತು ನಿರ್ವಹಣೆಗೆ ರೂಪಿಸಿದ ಕಾವೇರಿ 2.0 ತಂತ್ರಾಂಶ ಕಾನೂನು ನಿರ್ವಾತ ಸೃಷ್ಟಿಸುತ್ತಿದೆ. ಹೀಗಾಗಿ ಅದರಲ್ಲಿ ಮ್ಯುಟೇಷನ್ ಆಧಾರಿತ ಸಿವಿಲ್ ಕೋರ್ಟ್ ಡಿಕ್ರಿ ಎಂಬ ಹೊಸ ಕಾರ್ಯನಿರ್ವಹಣಾ ಶೀರ್ಷಿಕೆ ಸೇರ್ಪಡೆ ಮಾಡಿ ಪರಿಷ್ಕರಿಸುವಂತೆ ನೋಂದಣಿ ಮತ್ತು ಮದ್ರಾಂಕ ಇಲಾಖೆ ಹಾಗೂ ಕಂದಾಯ ಇಲಾಖೆಗೆ ಹೈಕೋರ್ಟ್ ನಿರ್ದೇಶನ ನೀಡಿದೆ.
ಸೆಂಟರ್ ಫಾರ್ ಸ್ಮಾರ್ಟ್ ಗವರ್ನೆನ್ಸ್ ಸಹಯೋಗದೊಂದಿಗೆ ಈ ಕಾರ್ಯ ಮಾಡಬೇಕು ಎಂದು ನ್ಯಾಯಾಲಯ ಸೂಚಿಸಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಸೆಷನ್ಸ್ ನ್ಯಾಯಾಲಯವು ಮೂಲ ಮೊಕದ್ದಮೆಯಲ್ಲಿ ಅಂಗೀಕರಿಸಿದ ರಾಜಿ ಅಂತಿಮ ತೀರ್ಪಿನ ನಿಯಮಗಳ ಪ್ರಕಾರ ತಮ್ಮ ಹೆಸರಿಗೆ ಖಾತ ವರ್ಗಾವಣೆ ಮಾಡುವಂತೆ ಕೋರಿ ಬಂಟ್ವಾಳ ತಾಲೂಕಿನ ಗಿಲ್ಬರ್ಟ್ ವಾಸ್ ಮತ್ತಿತರರು ಸಲ್ಲಿಸಿದ ಅರ್ಜಿ ಮಾನ್ಯ ಮಾಡಿದ ನ್ಯಾಯಮೂರ್ತಿ ಸಚಿನ್ ಶಂಕರ್ ಮಗದಂ ಅವರಿದ್ದ ಏಕ ಸದಸ್ಯ ಪೀಠ ಈ ನಿರ್ದೇಶನ ನೀಡಿದೆ.
ಪ್ರಸ್ತುತ ಚಾಲ್ತಿಯಲ್ಲಿರುವ ಕಾವೇರಿ 2.0 ತಂತ್ರಾಂಶ ಭೂ ಮಾರಾಟ, ಗಿಫ್ಟ್ ಡೀಡ್, ಅಡಮಾನ, ಪಿತ್ರಾರ್ಜಿತ ಆಸ್ತಿ ಕುರಿತ ವಹಿವಾಟುಗಳನ್ನು ಆಧರಿಸಿದೆ. ಆದರೆ, ಅದರಲ್ಲಿ ಆಸ್ತಿ ವಿವಾದಗಳ ಕುರಿತು ಸಿವಿಲ್ ನ್ಯಾಯಾಲಯಗಳ ತೀರ್ಪುಗಳನ್ನು ಪರಿಶೀಲಿಸಲು ಯಾವುದೇ ಅವಕಾಶವಿಲ್ಲ. ಈ ಹಿನ್ನೆಲೆಯಲ್ಲಿ ಮ್ಯುಟೇಷನ್ ಆಧಾರಿತ ಸಿವಿಲ್ ಕೋರ್ಟ್ ಡಿಕ್ರಿ ಸೌಲಭ್ಯ ಸೇರಿಸಿ ಕಾವೇರಿ 2.0 ತಂತ್ರಾಂಶ ಪರಿಷ್ಕರಿಸುವಂತೆ ನಿರ್ದೇಶನ ನೀಡಲಾಗಿದೆ.

