ಬೆಳಗಾವಿ: ವಿದ್ಯುತ್ ಕಂಬಕ್ಕೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಇಂಜಿನಿಯರಿಂಗ್ ವಿದ್ಯಾರ್ಥಿ ಸ್ಥಳದಲ್ಲೇ ಸಾವನ್ನಪ್ಪಿದ್ದು, ಇಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ.
ಚಿಕ್ಕೋಡಿ ಪಟ್ಟಣದ ವಿಶ್ವೇಶ್ವರಯ್ಯ ಬಡಾವಣೆ ಬಳಿ ಈ ದುರಂತ ಸಂಭವಿಸಿದೆ. ಮೂವರು ವಿದ್ಯಾರ್ಥಿಗಳು ಬೈಕ್ ನಲ್ಲಿ ಹೋಗುತ್ತಿದ್ದರು. ಈ ವೇಳೆ ಬೈಕ್ ರಸ್ತೆ ಬದಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದೆ. ಓರ್ವ ವಿದ್ಯಾರ್ಥಿ ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ಸಮರ್ಥ ಸುಖದೇವ ಅಪ್ಪಾಜಿಗೋಳ (20) ಮೃತ ವಿದ್ಯಾರ್ಥಿ. ಮೃತ ಸಮರ್ಥ ಚಿಂಚಣಿ ಗ್ರಾಮದವರಾಗಿದ್ದು, ಕೆಎಲ್ಇ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಯಾಗಿದ್ದರು.
ಬೈಕ್ನಲ್ಲಿದ್ದ ಅರವಿಂದ ಶಂಕರ ಮ್ಯಾಗೇರಿ (19) ಹಾಗೂ ಖಡಕಲಾಟ ಗ್ರಾಮದ ಸಚಿನ ಮಹೇಶ ಬಡಕೆ (19) ಗಾಯಗೊಂಡಿದ್ದು, ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
