HomeLatest Newsಮೆಕ್ಕೆಜೋಳ ಖರೀದಿ ಭರವಸೆ: ಉಪವಾಸ ಸತ್ಯಾಗ್ರಹ ಅಂತ್ಯಗೊಳಿಸಿದ ರೈತರು

ಮೆಕ್ಕೆಜೋಳ ಖರೀದಿ ಭರವಸೆ: ಉಪವಾಸ ಸತ್ಯಾಗ್ರಹ ಅಂತ್ಯಗೊಳಿಸಿದ ರೈತರು

ಧಾರವಾಡ: ಸರ್ಕಾರದ ಬೆಂಬಲ ಬೆಲೆ ಯೋಜನೆಯಲ್ಲಿ ಮೆಕ್ಕೆಜೋಳ ಖರೀದಿಗೆ ಅಗ್ರಹಿಸಿ ಕಳೆದ ಮೂರು ದಿನಗಳಿಂದ ನವಲಗುಂದ ಪಟ್ಟಣದಲ್ಲಿ ರೈತರು ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ಸ್ಥಳಕ್ಕೆ ಶಾಸಕ ಎನ್.ಹೆಚ್.ಕೋನರಡ್ಡಿ ಹಾಗೂ ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಭೇಟಿ ನೀಡಿ ರೈತರೊಂದಿಗೆ ಚರ್ಚಿಸಿದರು.

ಸರ್ಕಾರದಿಂದ ಬೆಂಬಲ ಬೆಲೆ ಯೋಜನೆಯಡಿ ಮೆಕ್ಕೆಜೋಳ ಖರೀದಿಸಲು ಸರ್ಕಾರ ಮಟ್ಟದಲ್ಲಿ ಚರ್ಚಿಸಿ, ಕ್ರಮವಹಿಸಲಾಗುತ್ತಿದೆ. ಸ್ವಲ್ಪ ದಿನಗಳ ಕಾಲಾವಕಾಶ ನೀಡಿ, ಉಪವಾಸ ಸತ್ಯಾಗ್ರಹ, ಧರಣಿ ಹಿಂಪಡೆಯುವಂತೆ ಶಾಸಕರು ಮತ್ತು ಜಿಲ್ಲಾಧಿಕಾರಿಗಳು ಮಾಡಿದ ಮನವಿ ಪರಿಗಣಿಸಿ, ರೈತರು ಎಳನೀರು ಸೇವಿಸುವ ಮೂಲಕ ಉಪವಾಸ ಸತ್ಯಾಗ್ರಹ ಅಂತ್ಯಗೊಳಿಸಿ ಧರಣಿ ಹಿಂಪಡೆದರು.

ಶಾಸಕ ಎನ್.ಹೆಚ್. ಕೋನರಡ್ಡಿ ಮಾತನಾಡಿ, ಸರ್ಕಾರ ಮಟ್ಟದಲ್ಲಿ ನಿನ್ನೆ ಮುಖ್ಯಮಂತ್ರಿ ಸಿದ್ಧರಾಮಯ್ಯವರಿಗೆ ಗೋವಿನ ಜೋಳದ ಖರೀದಿ ಬಗ್ಗೆ ಮಾತನಾಡಿದ್ದೇನೆ. ಕೇಂದ್ರ ಸರ್ಕಾರ ಅನುಮತಿ ಕೊಡಲಿ ಬಿಡಲಿ ಗೋವಿನ ಜೋಳ ಖರೀದಿಗೆ ಸರ್ಕಾರ ಬದ್ಧವಾಗಿದೆ. ತಾಂತ್ರಿಕ ಕಾರಣದಿಂದ ತಡವಾಗಿದೆ. ಸಚಿವರಾದ ಹೆಚ್. ಕೆ. ಪಾಟೀಲ ಹಾಗೂ ಚಲವರಾಯಸ್ವಾಮಿ ಅವರನ್ನು ದೆಹಲಿ ಕಳಿಸಿ ಗೊಂದಲಗಳನ್ನು ಸರಿಪಡಿಸಲು ಮುಖ್ಯಮಂತ್ರಿಗಳು ಸೂಚಿಸಿದ್ದಾರೆ. ಶೀಘ್ರದಲ್ಲಿ ಖರೀದಿ ಕೇಂದ್ರ ಸ್ಥಾಪಿಸುವ ಭರವಸೆಯನ್ನು ಅವರು ನೀಡಿದರು. ಮತ್ತು ರೈತ ಹೋರಾಟಗಾರರಿಗೆ ಸತ್ಯಾಗ್ರಹ ನಿಲ್ಲಿಸುಂತೆ ಶಾಸಕರು ಮನವಿ ಮಾಡಿದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

 ಜಿಲ್ಲಾಧಿಕಾರಿ ದಿವ್ಯ ಪ್ರಭು ಮಾತನಾಡಿ, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಹಾಗೂ ಸರ್ಕಾರ ಮಟ್ಟದ ಅಧಿಕಾರಿಗಳು, ಸರ್ಕಾರದಿಂದ ಮೆಕ್ಕೆಜೋಳ ಖರೀದಿಗೆ ಅಗತ್ಯವಿರುವ ಕ್ರಮಕೈಗೊಳ್ಳಲು ನಿರಂತರ ಪ್ರಯತ್ನ ಮಾಡುತ್ತಿದ್ದು, ಈ ವಿಷಯದ ಗಂಭೀರತೆಯ ಅರಿವು ಇದೆ. ಸಕಾಲಕ್ಕೆ ಸರಿಪಡಿಸಲಾಗುವುದು. ರಾಜ್ಯದಲ್ಲಿ ಮೊದಲಿಗರಾಗಿ ಧಾರವಾಡ ಜಿಲ್ಲೆಯಲ್ಲಿ ಬೆಳೆ ಹಾನಿ ಸಮೀಕ್ಷೆ ಮಾಡಿ ನವಲಗುಂದ ತಾಲೂಕಿಗೆ ಪ್ರಥಮದಲ್ಲಿ ಪರಿಹಾರ ನೀಡಿದ್ದು, ಇನ್ನೊಂದು ಹಂತದಲ್ಲಿ ಪರಿಹಾರ ಸಿಗಲಿದೆ ಎಂದು ರೈತರಿಗೆ ತಿಳಿಸಿದರು.

ರೈತರಿಗೆ ಯಾವುದಾದರೂ ಸಮಸ್ಯೆಗಳು ಇದ್ದರೆ, ನೀವು ತಹಸಿಲ್ದಾರ್ ಕಚೇರಿಗೆ ಹೋಗಿ ಅಥವಾ ಜಿಲ್ಲಾಡಳಿತಕ್ಕೆ ಟೋಲ್ ಫ್ರೀ ನಂಬರಗೆ ಕರೆ ಮಾಡಿ. ರೈತರ ಸಮಸ್ಯೆಗಳು ಏನೇ ಇದ್ದರೂ ಜಿಲ್ಲಾಡಳಿತವು ಆದಷ್ಟು ಬೇಗನೆ ಬಗೆಹರಿಸುತ್ತದೆ ಎಂದು ಅವರು ಹೇಳಿದರು.

ಶಾಸಕರು ಹಾಗೂ ಜಿಲ್ಲಾಧಿಕಾರಿ ಮನವಿಗೆ ಸ್ಪಂದಿಸಿ ರೈತ ಸೇನಾ ರಾಜ್ಯಾಧ್ಯಕ್ಷ ಶಂಕರ ಅಂಬಲಿ ಮಾತನಾಡಿ, ನಿಮ್ಮ ಮೇಲೆ ನಂಬಿಕೆ ಇಟ್ಟು ಕಾಲವಕಾಶ ನೀಡುತ್ತೇವೆ. ಭರವಸೆ ಭರವಸೆಯಾದರೆ ಮತ್ತೆ ಹೋರಾಟ ಮಾಡುತ್ತೇವೆ ಎಂದರು.

ರೈತ ಮುಖಂಡರಾದ ಲೋಕನಾಥ ಹೆಬಸೂರು, ರಘುನಾಥ ನಡುವಿನಮನಿ, ರಾಮದುರ್ಗ ರೈತ ಹೋರಾಟಗಾರ ಶಂಕರಗೌಡ ಪಾಟೀಲ, ಆನಂದ ಹವಳಕೋಡ, ದೇವೆಂದ್ರಪ್ಪ ಹಳ್ಳದ, ಜೀವನ ಪವಾರ ಸೇರಿದಂತೆ ಇತರರು ಇದ್ದರು. 

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗುಂಜನ್ ಆರ್ಯ, ಡಿಹೆಚ್‍ಓ ಡಾ.ಎಸ್.ಎಂ.ಹೊನಕೇರಿ, ತಹಶೀಲ್ದಾರ್ ಸುಧೀರ್ ಸಾಹುಕಾರ, ಸಿಪಿಐ ರವಿ ಕಪ್ಪತ್ತನವರ, ಡಾ. ರೂಪಾ ಹಾಗೂ ಇತರರು ಹಾಜರಿದ್ದರು.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular