ಬೆಂಗಳೂರು: ರಾಜ್ಯದ ಪ್ರತಿಷ್ಠಿತ ಹಾಲಿನ ಬ್ರ್ಯಾಂಡ್ ಆಗಿರುವ ನಂದಿನಿಗೆ ವಿದೇಶದಲ್ಲೂ ಬೇಡಿಕೆ ಹೆಚ್ಚಾಗಿದೆ. ಕೆಎಂಎಫ್ ದೇಶದ ಗಡಿ ದಾಟಿ ಆಸ್ಟ್ರೇಲಿಯಾ, ಅಮೆರಿಕ, ಸೌದಿ ಅರೇಬಿಯಾ ದೇಶದ ಮಾರುಕಟ್ಟೆ ಸೆಳೆಯಲು ಸಜ್ಜಾಗಿದೆ.
ಹಾಲು ಉತ್ಪಾದನೆಯಲ್ಲಿ ದೇಶದಲ್ಲೇ ಎರಡನೇ ಸ್ಥಾನದಲ್ಲಿರುವ ಕರ್ನಾಟಕದಿಂದ ಆಸ್ಟ್ರೇಲಿಯಾ, ಅಮೆರಿಕ, ಸೌದಿ ಅರೇಬಿಯಾ ದೇಶಗಳಿಗೆ ತುಪ್ಪ ರಫ್ತು ಮಾಡಲು ಕೆಎಂಎಫ್ ಮುಂದಾಗಿದೆ. ಈ ಮೂಲಕ ರಾಜ್ಯದ ಹೈನೋದ್ಯಮ ಕ್ಷೇತ್ರ ಮತ್ತೊಂದು ಮೈಲಿಗಲ್ಲು ಸಾಧಿಸಿದಂತಾಗಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ನವೆಂಬರ್ 25ರ ಮಂಗಳವಾರ ಅಮೆರಿಕ, ಆಸ್ಟ್ರೇಲಿಯಾ, ಸೌದಿ ಅರೇಬಿಯಾ ದೇಶಗಳಿಗೆ ತುಪ್ಪ ರಫ್ತು ಮಾಡುವ ಪ್ರಕ್ರಿಯೆಗೆ ಚಾಲನೆ ನೀಡಲಿದ್ದಾರೆ. ನಂದಿನಿ ಹಾಲು ಮತ್ತು ಹಾಲಿನ ಉತ್ಪನ್ನಗಳು ಮನೆ ಮಾತಾಗಿದ್ದು, ದೇಶದ ಸಹಕಾರಿ ಹೈನು ಉದ್ಯಮದಲ್ಲಿ ಗುಜರಾತ್ ನ ಅಮುಲ್ ನಂತರದ ಸ್ಥಾನದಲ್ಲಿರುವ ಕೆಎಂಎಫ್ ಹೊರ ರಾಜ್ಯಗಳು ಮತ್ತು ವಿದೇಶಗಳಿಗೆ ಹಾಲಿನ ಉತ್ಪನ್ನಗಳನ್ನು ರಫ್ತು ಮಾಡುತ್ತಿದೆ. ಈಗ ದೊಡ್ಡ ಪ್ರಮಾಣದಲ್ಲಿ ಸೌದಿ ಅರೇಬಿಯಾ, ಅಮೆರಿಕ, ಆಸ್ಟ್ರೇಲಿಯಾ ಮಾರುಕಟ್ಟೆ ಪ್ರವೇಶಿಸಲು ಸಜ್ಜಾಗಿದೆ. ಈ ಮೂರು ದೇಶಗಳಿಗೆ 15 ಟನ್ ನಂದಿನಿ ತುಪ್ಪವನ್ನು ರಫ್ತು ಮಾಡಲಾಗುವುದು ಎನ್ನಲಾಗಿದೆ.
