ಬೆಂಗಳೂರು: ಉಗ್ರರ ದಾಳಿ ನಡೆದ ಜಮ್ಮು ಕಾಶ್ಮೀರದ ಪಹಲ್ಗಾಂನಲ್ಲಿ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಪಾಲಿಕೆಗಳ ಅಧಿಕಾರಿಗಳು, ನೌಕರರ ಕ್ಷೇಮಾಭಿವೃದ್ಧಿ ಸಂಘದಿಂದ ಕನ್ನಡ ರಾಜ್ಯೋತ್ಸವವನ್ನು ಶನಿವಾರ ಅದ್ದೂರಿಯಾಗಿ ಆಚರಿಸಲಾಗಿದೆ,
ಕಳೆದ ಏಪ್ರಿಲ್ ನಲ್ಲಿ ಉಗ್ರರ ದಾಳಿಯಲ್ಲಿ ಮೃತಪಟ್ಟವರಿಗೆ ಇದೇ ಸಂದರ್ಭದಲ್ಲಿ ಶ್ರದ್ಧಾಂಜಲಿ ಸಲ್ಲಿಸಲಾಗಿದೆ. 500ಕ್ಕೂ ಹೆಚ್ಚು ಅಧಿಕಾರಿಗಳು, ನೌಕರರು ಪಹಲ್ಗಾಂನಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್. ಷಡಾಕ್ಷರಿ ಮಾತನಾಡಿ, ಅಧಿಕಾರಿಗಳು, ಸಿಬ್ಬಂದಿ ಮನೆ, ಮನಗಳಲ್ಲಿ ಹೆಚ್ಚೆಚ್ಚು ಕನ್ನಡ ಮಾತನಾಡುವ ಕೆಲಸ ಮಾಡಬೇಕು. ಗಡಿನಾಡ ಜಿಲ್ಲೆಗಳಲ್ಲಿ ಸರ್ಕಾರಿ ಅಧಿಕಾರಿಗಳು, ನೌಕರರು ಕನ್ನಡ ಭಾಷೆ ಉಳಿವಿಗೆ ಶ್ರಮಿಸಬೇಕು ಎಂದು ಹೇಳಿದ್ದಾರೆ.
ಆಡಳಿತ ವ್ಯವಸ್ಥೆಯಲ್ಲಿ ಅಧಿಕಾರಿಗಳು, ನೌಕರರು ಕನ್ನಡ ಭಾಷೆಯನ್ನು ಹೆಚ್ಚು ಬಳಕೆ ಮಾಡುವ ಮೂಲಕ ನಾವೆಲ್ಲರೂ ಹೆಚ್ಚು ಬಳಕೆ ಮಾಡಬೇಕು. ಈ ವಿಚಾರದಲ್ಲಿ ಸರ್ಕಾರ ಸಾಕಷ್ಟು ಕೆಲಸ ಮಾಡುತ್ತಿದೆ ಎಂದು ಹೇಳಿದ್ದಾರೆ.
ಅಂಬೇಡ್ಕರ್ ಅಭಿವೃದ್ಧಿ ನಿಗಮದ ಅಧ್ಯಕ್ಷ ಆರ್. ಸಂಪತ್ ರಾಜ್, ಪ್ರವಾಸಿಗರಿಗೆ ಕಾಶ್ಮೀರದವರು ತೋರಿಸುವ ಪ್ರೀತಿ ಗೌರವಕ್ಕೆ ಸಾಟಿ ಇಲ್ಲ. ಪಹಲ್ಗಾಂನಲ್ಲಿ ಕನ್ನಡ ರಾಜ್ಯೋತ್ಸವ ಆಚರಿಸುವುದರ ಜೊತೆಗೆ ಉಗ್ರರ ದಾಳಿಯಲ್ಲಿ ಮಡಿದವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಗಿದೆ ಎಂದು ಹೇಳಿದ್ದಾರೆ.
ಪಹಲ್ಗಾಂ ಪೊಲೀಸ್ ವಿಭಾಗದ ಡಿವೈಎಸ್ಪಿ ಫಾರುಕ್ ಅಹಮದ್, ಕನ್ನಡ ಭಾಷೆ ಅರ್ಥವಾಗದಿದ್ದರೂ ನಿಮ್ಮ ಪ್ರೀತಿ ವಿಶ್ವಾಸದ ಕಾರಣಕ್ಕೆ ಭಾಗವಹಿಸಿದ್ದೇನೆ. ಹುತಾತ್ಮರಿಗೆ ಈ ಕಾರ್ಯಕ್ರಮ ಅರ್ಪಣೆ ಮಾಡಿರುವುದು ಶ್ಲಾಘನೀಯ ಎಂದು ಹೇಳಿದ್ದಾರೆ.
ಬೆಂಗಳೂರು ದೂರದರ್ಶನ ಕೇಂದ್ರ ವಿಭಾಗದ ಮುಖ್ಯಸ್ಥರಾದ ಹೆಚ್.ಎನ್. ಆರತಿ, ಮಾಜಿ ಮೇಯರ್ ಗೌತಮ್ ರಾಜ್, ಸಚಿವಾಲಯ ನೌಕರರ ಸಂಘದ ಅಧ್ಯಕ್ಷ ರಮೇಶ್ ಸಂಗಾ ಮಾತನಾಡಿದರು. ಖ್ಯಾತ ಗಾಯಕಿ ಅನುರಾಧ ಭಟ್ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು.
