HomeLatest NewsBIG NEWS: ಪ್ರತಿ ವರ್ಷ 5 ಪರಿಸರವಾದಿಗಳಿಗೆ ‘ಸಾಲುಮರದ ತಿಮ್ಮಕ್ಕ’ ಹೆಸರಲ್ಲಿ ಪ್ರಶಸ್ತಿ: ಸಿಎಂ ಸಿದ್ಧರಾಮಯ್ಯ...

BIG NEWS: ಪ್ರತಿ ವರ್ಷ 5 ಪರಿಸರವಾದಿಗಳಿಗೆ ‘ಸಾಲುಮರದ ತಿಮ್ಮಕ್ಕ’ ಹೆಸರಲ್ಲಿ ಪ್ರಶಸ್ತಿ: ಸಿಎಂ ಸಿದ್ಧರಾಮಯ್ಯ ಘೋಷಣೆ

ಬೆಂಗಳೂರು: ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯಲ್ಲಿ ಒಂದು ಕೋಟಿ ದತ್ತಿ ನಿಧಿಯನ್ನು ಸ್ಥಾಪಿಸಿ, ಠೇವಣಿ ಇರುವ ಹಣದ ಬಡ್ಡಿಯಲ್ಲಿ ಪ್ರತಿ ವರ್ಷವೂ ಕಾರ್ಯಕ್ರಮವನ್ನು ಆಯೋಜಿಸಲಾಗುವುದು ಹಾಗೂ ಕನಿಷ್ಠ ಐದು ಪರಿಸರವಾದಿಗಳಿಗೆ ತಿಮ್ಮಕ್ಕನವರ ಹೆಸರಿನಲ್ಲಿ ಪ್ರಶಸ್ತಿಯನ್ನು ಪ್ರತಿ ವರ್ಷ ಕೊಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಹೇಳಿದ್ದಾರೆ.

ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರಿಂದ ಸ್ಥಾಪಿಸಲ್ಪಟ್ಟ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗೆ 50 ವರ್ಷ ತುಂಬಿದ ಹಿನ್ನೆಲೆಯಲ್ಲಿ ಅರಮನೆ ಮೈದಾನದಲ್ಲಿ ಆಯೋಜಿಸಿದ್ದ “ಸುವರ್ಣ ಮಹೋತ್ಸವ”ವನ್ನು ಉದ್ಘಾಟಿಸಿ, ಮಂಡಳಿಯ ಸಾಧನೆಗಳನ್ನು ಸ್ಮರಿಸಿದರು.

ಇಂದು ಮಾಜಿ ಪ್ರಧಾನಿ ಶ್ರೀಮತಿ ಇಂದಿರಾ ಗಾಂಧಿಯವರ ಜನ್ಮದಿನ. 1974ರಲ್ಲಿ ಈ ದಿನದಂದು ಮಾಲಿನ್ಯ ನಿಯಂತ್ರಣ ಮಂಡಳಿ ಸ್ಥಾಪಿತವಾಯಿತು. ಶ್ರೀಮತಿ ಇಂದಿರಾ ಗಾಂಧಿಯವರು ಪರಿಸರ ಮತ್ತು ಅರಣ್ಯ ರಕ್ಷಣೆಗೆ ಹಲವು ಪ್ರಮುಖ ಕಾಯ್ದೆಗಳನ್ನು ಜಾರಿಗೆ ತಂದಿದ್ದರು. ಪರಿಸರ ಸಂರಕ್ಷಣೆಯ ಜವಾಬ್ದಾರಿ ಕೇವಲ ಸರ್ಕಾರದ ಮೇಲಿಲ್ಲ. ಸಾರ್ವಜನಿಕರು ಪರಿಸರ ಸಂರಕ್ಷಣೆಯಲ್ಲಿ ಸಕ್ರಿಯರಾಗಿ ಪಾಲ್ಗೊಳ್ಳಬೇಕು ಎಂದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಭೂಮಿಯ ಮೇಲಿನ ಜೀವಸಂಕುಲಕ್ಕೆ ಬದುಕಲು ಉತ್ತಮ ಪರಿಸರ ಅವಶ್ಯ. ಮಾಲಿನ್ಯ ರಹಿತ ಪರಿಸರವನ್ನು ನಿರ್ಮಿಸುವುದು ಅತ್ಯಂತ ಅವಶ್ಯವಾಗಿದೆ. ನಾವು ಉಸಿರಾಡುವ ಗಾಳಿ, ನೀರು ಹಾಗೂ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ಅಗತ್ಯ. ಕೇಂದ್ರದ ವರದಿಯ ಪ್ರಕಾರ ದೇಶದ ಹಲವು ನಗರಗಳು ಮಾಲಿನ್ಯದಿಂದ ಕೂಡಿವೆ. ಈ ಪಟ್ಟಿಯಲ್ಲಿ ಬೆಂಗಳೂರು, ದಾವಣಗೆರೆ, ಕಲಬುರ್ಗಿ ನಗರವೂ ಸೇರಿರುವುದು ಆತಂಕಕಾರಿ ವಿಷಯ. ನಮ್ಮ ರಾಜ್ಯವನ್ನು ವಾಸಯೋಗ್ಯವಾಗಿಸಲು, ಜನರೆಲ್ಲರೂ ಪರಿಸರ ಬಗ್ಗೆ ಕಾಳಜಿಯನ್ನು ಬೆಳೆಸಿಕೊಳ್ಳಬೇಕು ಎಂದು ಹೇಳಿದ್ದಾರೆ.

ಬೆಂಗಳೂರು ನಗರ ಒಂದರಲ್ಲೇ 900 ಟನ್ ಪ್ಲಾಸ್ಟಿಕ್  ಉತ್ಪಾದನೆಯಾಗುತ್ತದೆ. ಇದನ್ನು ಜನ ಅರ್ಥಮಾಡಿಕೊಳ್ಳದೇ ಹೋದರೆ ಪ್ಲಾಸ್ಟಿಕ್ ಮುಕ್ತ ನಗರವಾಗಲು ಸಾಧ್ಯವಿಲ್ಲ. ಪರಿಸರದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿ, ಸರ್ಕಾರದ ಜೊತೆ ಕೈಜೋಡಿಸಿದಾಗ ಮಾತ್ರ 2030ರ ಹೊತ್ತಿಗೆ ಬೆಂಗಳೂರನ್ನು ಪ್ಲಾಸ್ಟಿಕ್ ಮುಕ್ತ ನಗರವಾಗಿಸಲು ಸಾಧ್ಯ ಎಂದರು.

ಕೇಂದ್ರದ ವರದಿಯ ಪ್ರಕಾರ 131 ನಗರಗಳು ಮಾಲಿನ್ಯದಿಂದ ಕೂಡಿದ್ದು, ನಿಗದಿತ ಮಟ್ಟಕ್ಕಿಂತಲೂ ಹೆಚ್ಚಿದೆ. ಅದರಲ್ಲಿ ಬೆಂಗಳೂರು, ಹುಬ್ಬಳ್ಳಿ-ಧಾರವಾಡ, ದಾವಣಗೆರೆ ಮತ್ತು ಕಲಬುರಗಿ ಜಿಲ್ಲೆಗಳು ಸೇರಿವೆ. ಇದು ಆತಂಕಕಾರಿ ವಿಷಯ. ಬೆಂಗಳೂರಿನಲ್ಲಿ ವಾಸ ಮಾಡಲು ಸಾಧ್ಯವಾಗದಂತಹ ಪರಿಸ್ಥಿತಿ ಮುಂದಿನ ದಿನಗಳಲ್ಲಿ ನಿರ್ಮಾಣವಾಗುವ ಸಾಧ್ಯತೆ ಇದೆ. ಅದಕ್ಕಾಗಿ ಎಲ್ಲರೂ  ಪರಿಸರದ ಬಗ್ಗೆ ಪ್ರೀತಿಯನ್ನು ಬೆಳೆಸಿಕೊಳ್ಳಬೇಕು. ಸಾಲು ಮರದ ತಿಮ್ಮಕ್ಕ ಇದಕ್ಕೆ ಶ್ರೇಷ್ಠ ಉದಾಹರಣೆ. ಇತ್ತೀಚೆಗೆ ನಿಧನರಾದ ಅವರು ಬಹಳಷ್ಟು ಮರಗಿಡಗಳನ್ನು ತಮ್ಮ ಮಕ್ಕಳಂತೆ ಬೆಳೆಸುವ ಪ್ರವೃತ್ತಿಯನ್ನು ಬೆಳೆಸಿಕೊಂಡಿದ್ದರು. ಪ್ರತಿಯೊಬ್ಬರೂ ಸಾಲಮರದ ತಿಮ್ಮಕ್ಕನವರಂತೆ ಆಗಬೇಕು ಎನ್ನುವ ಆಶಯ ನಮ್ಮದು ಎಂದರು.

ಬೆಂಗಳೂರು ಗಾರ್ಬೇಜ್ ನಗರ ಎಂಬ ಟೀಕೆಗೆ ನಗರ ಗುರಿಯಾಗುತ್ತಿದ್ದು, ಬೆಂಗಳೂರನ್ನು ಗಾರ್ಬೇಜ್ ನಗರವಾಗಿಸುವುದು ನಮ್ಮ ಉದ್ದೇಶವಲ್ಲ. ಪ್ಲಾಸ್ಟಿಕ್ ಮತ್ತು ಕಸ ಮುಕ್ತ ನಗರವಾಗಿಸಬೇಕು ಎನ್ನುವುದು ಸರ್ಕಾರದ ಉದ್ದೇಶ. ಜನರೂ ಹಸಿ ಮತ್ತು ಒಣ ತ್ಯಾಜ್ಯವನ್ನು ಬೇರ್ಪಡಿಸಬೇಕು ಎಂದು ಮನವಿ ಮಾಡುತ್ತೇನೆ. ಕೈಗಾರಿಕೋದ್ಯಮಿಗಳು ತ್ಯಾಜ್ಯವನ್ನು ಸಾರ್ವಜನಿಕರಿಗೆ, ಸಮಾಜಕ್ಕೆ ಹಾಗೂ ಪರಿಸರಕ್ಕೆ ಹಾನಿಯಾಗದಂತೆ ನಿರ್ವಹಿಸುವುದು ಕೈಗಾರಿಕೋದ್ಯಮಿಗಳ ಜವಾಬ್ದಾರಿ ಎಂದು ತಿಳಿಸಿದ್ದಾರೆ.

ನಿರುದ್ಯೋಗದ ಸಮಸ್ಯೆ ಬಗೆಹರಿಸಲು ಕೈಗಾರಿಕೆಗಳು  ಅಗತ್ಯ. ಆದರೆ ಪರಿಸರ ಮಾಲಿನ್ಯ ಉಂಟಾಗದಂತೆ ಎಚ್ಚರ ವಹಿಸುವುದು ಕೂಡ ಅವಶ್ಯಕ. ವಿದ್ಯಾರ್ಥಿಗಳು ಪರಿಸರ ಸಂರಕ್ಷಣೆಯಲ್ಲಿ ತೊಡಗಿ ಇತರರಿಗೆ ಮಾದರಿಯಾಗಬೇಕು. ತಿಮ್ಮಕ್ಕ ಪರಿಸರವಾದಿಯಾಗಿದ್ದರಿಂದ ನಾವು ಅವರನ್ನು ನೆನೆಯುತ್ತಿದ್ದೇವೆ. ವಿದ್ಯಾರ್ಥಿಗಳು ಪ್ರತಿ ವರ್ಷ ಇಂಥ ಸಮಾರಂಭಗಳನ್ನು ಆಯೋಜಿಸಿ ಜಾಗೃತಿ ಉಂಟುಮಾಡಬೇಕು ಎಂದು ಹೇಳಿದ್ದಾರೆ.

ಮಾಲಿನ್ಯ ನಿಯಂತ್ರಣ ಮಂಡಳಿಯ ಅಧ್ಯಕ್ಷರು, ಶಾಸಕರು ಆದ ಪಿ.ಎಂ.ನರೇಂದ್ರಸ್ವಾಮಿ ಅವರು ಅಧ್ಯಕ್ಷತೆ ವಹಿಸಿದ್ದ ಕಾರ್ಯಕ್ರಮದಲ್ಲಿ ಸಚಿವರುಗಳಾದ ಈಶ್ವರ್ ಖಂಡ್ರೆ, ಚೆಲುವರಾಯಸ್ವಾಮಿ, ಎಂ.ಸಿ.ಸುಧಾಕರ್, ವಿಧಾನ‌ಪರಿಷತ್ ಸದಸ್ಯರಾದ ಸುಧಾಮದಾಸ್, ದಿನೇಶ್ ಗೂಳೀಗೌಡ ಸೇರಿ ಹಲವು ಶಾಸಕರು ಮತ್ತು ಮುಖಂಡರುಗಳು ಉಪಸ್ಥಿತರಿದ್ದರು.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular