HomeLatest Newsಡಿ. 8ರಿಂದ ಬೆಳಗಾವಿಯಲ್ಲಿ ವಿಧಾನ ಮಂಡಲ ಚಳಿಗಾಲ‌ ಅಧಿವೇಶನ: ಸಕಲ ಸಿದ್ಧತೆಗೆ ಸ್ಪೀಕರ್ ಯು.ಟಿ. ಖಾದರ್...

ಡಿ. 8ರಿಂದ ಬೆಳಗಾವಿಯಲ್ಲಿ ವಿಧಾನ ಮಂಡಲ ಚಳಿಗಾಲ‌ ಅಧಿವೇಶನ: ಸಕಲ ಸಿದ್ಧತೆಗೆ ಸ್ಪೀಕರ್ ಯು.ಟಿ. ಖಾದರ್ ಸೂಚನೆ

ಬೆಳಗಾವಿ: ಡಿಸೆಂಬರ್ 8ರಿಂದ ಜರುಗಲಿರುವ ವಿಧಾನಮಂಡಳದ ಚಳಿಗಾಲ ಅಧಿವೇಶನ ಸಂದರ್ಭದಲ್ಲಿ‌ ಯಾವುದೇ ಲೋಪಗಳಿಗೆ ಆಸ್ಪದ ನೀಡದಂತೆ ಅಧಿಕಾರಿಗಳು ತಮ್ಮ ಜವಾಬ್ದಾರಿಯನ್ನು ಸಮರ್ಪಕವಾಗಿ ನಿರ್ವಹಿಸಿ ಬೆಳಗಾವಿ ಚಳಿಗಾಲ‌ ಅಧಿವೇಶನ ಯಶಸ್ವಿಗೊಳಿಸಬೇಕು ಎಂದು ವಿಧಾನಸಭೆ ಸಭಾಧ್ಯಕ್ಷ ಯು.ಟಿ.ಖಾದರ್ ಸೂಚಿಸಿದರು.

 ಸುವರ್ಣ ವಿಧಾನಸೌಧದಲ್ಲಿ ಬುಧವಾರ ಜರುಗಿದ ಚಳಿಗಾಲ ಆಧಿವೇಶನ ಪೂರ್ವ ಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಡಿ. 8 ರಿಂದ 20 ರ ವರೆಗೆ ಜರುಗಲಿರುವ ಚಳಿಗಾಲದ ಅಧಿವೇಶನಕ್ಕೆ ನಿಯೋಜಿತ ಅಧಿಕಾರಿ‌ ಸಿಬ್ಬಂದಿ ಬದ್ದತೆಯೊಂದಿಗೆ ಕಾರ್ಯ‌ನಿರ್ವಹಿಸುವುದರ ಮೂಲಕ ಅಧಿವೇಶನ ಯಶಸಸ್ವಿಗೊಳಿಸಬೇಕು. ಅಧಿವೇಶನದ ಸಂದರ್ಭದಲ್ಲಿ ಎದುರಾಗುವ ಯಾವುದೇ ತೆರನಾದ ಸಮಸ್ಯೆಗಳನ್ನು ಕೂಡಲೇ ಸಂಬಂಧಿತರ ಗಮನಕ್ಕೆ ತಂದು ತರುವುದರ ಮೂಲಕ‌ ಸಮಸ್ಯಗಳನ್ನು ಪರಿಹರಿಸಿಕೊಳ್ಳಬೇಕು ಎಂದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ದೂರಸಂಪರ್ಕ ಹಾಗೂ ನೆಟವರ್ಕ್ ಸಮಸ್ಯೆಗಳು ತಲೆದೋರದಂತೆ ನಿಗಾವಹಿಸಬೇಕು. ಅಗತ್ಯವಿರುವ ಗಣಕ ಯಂತ್ರ ಸೇರಿದಂತೆ ಇತರೆ ವ್ಯವಸ್ಥೆಗಳನ್ನು ಮಾಡಿಕೊಳ್ಳಬೇಕು. ಅಧಿವೇಶನ ಸಂದರ್ಭದಲ್ಲಿ ಪ್ರತಿಭಟನಕಾರರಿಗೆ ಸೂಕ್ತ ಸ್ಥಳಾವಕಾಶವನ್ನು ಗುರುತಿಸುವುದರ ಜೊತೆಗೆ ಪ್ರತಿಭಟನಾ ಸ್ಥಳದಲ್ಲಿ ಅಗತ್ಯ ಸೌಲಭ್ಯ‌ ಹಾಗೂ ಸೂಕ್ತ ಪೋಲಿಸ್ ಭದ್ರತೆ ಒದಗಿಸಲು‌ ಕ್ರಮ ವಹಿಸಲು ತಿಳಿಸಿದರು.

ಸಾರ್ವಜನಿಕರಿಗೆ ಮಾಹಿತಿ ಕೇಂದ್ರ:

ಅದೇ ರೀತಿ ಸುವರ್ಣ ವಿಧಾನ‌ಸೌಧದಲ್ಲಿ ಸೂಕ್ತ ಭದ್ರತೆ ಹಾಗೂ ಸುಗಮ‌ ಸಂಚಾರಕ್ಕೆ ಸೂಕ್ತ ವ್ಯವಸ್ಥೆ ಮಾಡಿಕೊಳ್ಳಬೇಕು. ಅಧಿವೇಶನ ಸಂದರ್ಭದಲ್ಲಿ ಆಗಮಿಸುವ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಸಹಾಯವಾಣಿ ಕೇಂದ್ರವನ್ನು‌ ಸ್ಥಾಪಿಸಬೇಕು ಎಂದು ಸಭಾಧ್ಯಕ್ಷರು ಸೂಚಿಸಿದರು. 

ಕಳೆದ‌ ಬಾರಿಯಂತೆ ಈ ಬಾರಿಯೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಬೇಕು. ಸುವರ್ಣ ವಿಧಾನಸೌಧದ ಆವರಣದಲ್ಲಿ ಕಳೆದ ಬಾರಿ ಶಾಸಕರುಗಳು ಸಸಿಗಳನ್ನು ನೆಟ್ಟಿದ್ದು, ಈ ಬಾರಿಯೂ ಪ್ರತಿ ಶಾಸಕರುಗಳಿಂದ ಸಸಿಗಳನ್ನು ನೆಡಲು ಸೂಕ್ತ ವ್ಯವಸ್ಥೆ ಮಾಡಿಕೊಳ್ಳಲು ತಿಳಿಸಿದರು. 

ಅಧಿವೇಶನಕ್ಕೆ ಸಂಬಂಧಿಸಿದಂತೆ ವಿತರಿಸಲಾಗುವ ಪಾಸ್ ಗಳಲ್ಲಿ ಯಾವುದೇ ಗೊಂದಲಗಳಾಗದಂತೆ ನಿರ್ವಹಿಸಬೇಕು. ಪಾಸ್ ವಿತರಣೆಗೆ ಸಂಬಂಧಿಸಿದಂತೆ ಪೋಲಿಸ್ ಇಲಾಖೆಯೊಂದಿಗೆ ಸಮನ್ವಯ ಸಾಧಿಸಬೇಕು. ಕಲಾಪಗಳ‌ ವೀಕ್ಷಣೆಗೆ ಆಗಮಿಸುವ ಸಾರ್ವಜನಿಕರಿಗೆ, ಶಾಲಾ‌ ಮಕ್ಕಳಿಗೆ ಕಲಾಪಗಳ ವೀಕ್ಷಣೆಗೆ ಸೂಕ್ತ ಸಮಯವನ್ನು ನಿಗದಿಪಡಿಸಬೇಕು.

ವಿಧಾನ ಮಂಡಲದ ಕಾರ್ಯಕಲಾಪಗಳ‌ ವೀಕ್ಷಣೆಗೆ ಆಗಮಿಸುವ ಶಾಲಾ, ಕಾಲೇಜು ವಿಧ್ಯಾರ್ಥಿಗಳ ಜೊತೆಗೆ ಪೌರ ಕಾರ್ಮಿಕರರು, ಲಿಂಗತ್ವ ಅಲ್ಪಸಂಖ್ಯಾತರಿಗೆ ಹಾಗೂ ಮಹಿಳೆಯರಿಗಾಗಿ ಅವಕಾಶ ಕಲ್ಪಿಸಲು ಚಿಂತಿಸಲಾಗಿದ್ದು ಈ ಕುರಿತು ಅಗತ್ಯದ ವ್ಯವಸ್ಥೆ ಮಾಡಲು ತಿಳಿಸಿದರು.

ವಿಧಾನ ಪರಿಷತ್ ಸಭಾಪತಿಬಸವರಾಜ ಹೊರಟ್ಟಿ ಮಾತನಾಡಿ, ಚಳಿಗಾಲ ಅಧಿವೇಶನಕ್ಕೆ ಆಗಮಿಸುವ ಸಚಿವರು, ಶಾಸಕರುಗಳಿಗೆ, ಸಚಿವಾಲಯದ ಅಧಿಕಾರಿ, ಸಿಬ್ಬಂದಿ ಹಾಗೂ ಮಾರ್ಷಲ್ ಗಳಿಗೆ ಸೂಕ್ತ ಸಾರಿಗೆ ಹಾಗೂ ವಸತಿ ವ್ಯವಸ್ಥೆ ಕಲ್ಪಿಸಬೇಕು. ಅಧಿವೇಶನ‌ ಸಂದರ್ಭದಲ್ಲಿ ಸಚಿವರು, ಶಾಸಕರು ತಂಗುವ ಹೋಟೆಲ್ ಗಳಲ್ಲಿ ತಜ್ಞ ವೈದ್ಯರ ತಂಡವನ್ನು‌ ನಿಯೋಜಿಸಬೇಕು. ಅದೇ ರೀತಿ ಸುವರ್ಣ ವಿಧಾನ‌ಸೌಧದಲ್ಲಿಯೂ ಸಹ ವೈದ್ಯರ ತಂಡವನ್ನು ಸುಸಜ್ಜಿತ ಅಂಬ್ಯಲೆನ್ಸ್ ನೊಂದಿಗೆ ನಿಯೋಜಿಸಲು ತಿಳಿಸಿದರು.

ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ‌ ಮಾತನಾಡಿ, ಚಳಿಗಾಲ ಅಧಿವೇಶನಕ್ಕೆ ಸಂಬಂಧಿಸಿದಂತೆ ಕೈಗೊಳ್ಳಲಾದ ಪೂರ್ವ ತಯಾರಿ ಕುರಿತು ವಿವರಿಸಿದರು. ಪ್ರಸಕ್ತ ಬೆಳಗಾವಿ ಚಳಿಗಾಲ‌ ಅಧಿವೇಶನ ಯಶಸ್ವಿಗಾಗಿ ಕಳೆದ‌ ಸಾಲಿನಂತೆಯೇ ಈ ಬಾರಿಯೂ ಹನ್ನೆರೆಡು ಸಮಿತಿಗಳನ್ನು ರಚಿಸಿದ್ದು, ಆಯಾ ಸಮಿತಿಗಳು ತಮ್ಮ ಜವಾಬ್ದಾರಿಗಳನ್ನು ಅರಿತು ಕಾರ್ಯನಿರ್ವಹಿಸುವಂತೆ ಈಗಾಗಲೇ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.

ಪೊಲೀಸ್ ಆಯುಕ್ತ ಭೋರಸೆ ಗುಲಾಬರಾವ್ ಭೂಷಣ ಅವರು‌ ಮಾತನಾಡಿ, ಅಧಿವೇಶನದ ಸಂದರ್ಭದಲ್ಲಿ ಕಾನೂನು ಸುವ್ಯವಸ್ಥೆಗೆ ಸಂಬಂಧಿಸಿದಂತೆ ಸೂಕ್ತ ಪೋಲಿಸ್ ಭದ್ರತೆಗೆ ಕ್ರಮ ಕೈಗೊಳ್ಳಲಾಗುತ್ತಿದೆ. ಪೋಲಿಸ್ ಭದ್ರತೆಗೆ ಸಂಬಂಧಿಸಿದಂತೆ ಬೇರೆ ಜಿಲ್ಲೆಗಳಿಂದ‌ ಹೆಚ್ಚುವರಿ ಪೊಲೀಸ್ ಸಿಬ್ಬಂದಿಗಳನ್ನು ಅಧಿವೇಶನಕ್ಕೆ ನಿಯೋಜಿಸಲಾಗುತ್ತಿದೆ.‌ ಅಧಿವೇಶನ‌ ಸಂದರ್ಭದಲ್ಲಿ ನಿಯೋಜಿತ ಪೊಲೀಲಿಸ್ ಸಿಬ್ಬಂದಿ‌ ಅಧಿಕಾರಿಗಳಿಗಾಗಿ ವಸತಿ ಹಾಗೂ ಊಟದ ವ್ಯವಸ್ಥೆಯನ್ನು ಮಾಡಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು.

 ವಿಧಾನ ಸಭೆ ಉಪ ಸಭಾಧ್ಯಕ್ಷ ರುದ್ರಪ್ಪ ಲಮಾಣಿ, ಶಾಸಕ ರಾಜು(ಆಸೀಫ್) ಸೇಠ್, ವಿಧಾನಸಭೆ ಕಾರ್ಯದರ್ಶಿ ಆರ್. ವಿಶಾಲಾಕ್ಷಿ, ವಿಧಾನ ಪರಿಷತ್ ಕಾರ್ಯದರ್ಶಿ ಮಹಾಲಕ್ಷ್ಮೀ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಭೀಮಾಶಂಕರ ಗುಳೇದ, ಜಿಲ್ಲಾ‌ ಪಂಚಾಯತ‌ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ ಶಿಂಧೆ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಹಾಜರಿದ್ದರು.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular