ಹಾಸನ: ಪತಿ ಮತ್ತು ಅತ್ತೆಯ ಕಿರುಕುಳಕ್ಕೆ ಮನನೊಂದು ಮಹಿಳೆ ಮಗುವಿನೊಂದಿಗೆ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಹಾಸನ ಜಿಲ್ಲೆ ಅರಕಲಗೂಡು ತಾಲೂಕಿನ ರಾಮನಾಥಪುರ ಸಮೀಪ ನಡೆದಿದೆ.
ಮಹಾದೇವಿ(29) ಆತ್ಮಹತ್ಯೆ ಮಾಡಿಕೊಂಡ ಮಹಿಳೆ. ಮೂರು ವರ್ಷದ ಹಿಂದೆ ಅರಕಲಗೂಡು ತಾಲೂಕು ಸೀಬಿಹಳ್ಳಿಯ ಕುಮಾರ್ ಜೊತೆಗೆ ಎರಡನೇ ವಿವಾಹವಾಗಿದ್ದರು. ಮೊದಲ ಪತಿಯಿಂದ ವಿಚ್ಛೇದನ ಪಡೆದಿದ್ದ ಸಾಲಿಗ್ರಾಮ ತಾಲೂಕಿನ ಕರ್ಪೂರಹಳ್ಳಿ ಗ್ರಾಮದ ಮಹಾದೇವಿ ಎರಡನೇ ಮದುವೆ ಸಂದರ್ಭದಲ್ಲಿ ಕುಟುಂಬದವರು ವರದಕ್ಷಿಣೆಯಾಗಿ 100 ಗ್ರಾಂ ಚಿನ್ನ ನೀಡಿದ್ದರು.
ಇತ್ತೀಚೆಗೆ ಪತ್ನಿ ಮೇಲೆ ಅನುಮಾನಪಡುತ್ತಿದ್ದ ಕುಮಾರ್ ನಿಂದಿಸಿ ಕಿರುಕುಳ ನೀಡುತ್ತಿದ್ದ. ಕಿರುಕುಳ ತಾಳದೆ 15 ದಿನದ ಹಿಂದೆ ತವರು ಮನೆ ಸೇರಿದ್ದ ಮಹಾದೇವಿಗೆ ಮೆಸೇಜ್ ಮಾಡಿ ಕುಮಾರ್ ಮಾನಸಿಕ ಕಿರುಕುಳ ನೀಡುತ್ತಿದ್ದ. ಗುರುವಾರ ಹಾಸನಕ್ಕೆ ಬಂದ ವೇಳೆ ಬಸ್ ನಿಲ್ದಾಣದಲ್ಲಿ ನಿಂದಿಸಿದ್ದರಿಂದ ಮನನೊಂದ ಮಹಾದೇವಿ ಹಾಸನ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದರು.
ಪತಿಯ ನಿಂದನೆ ಸಹಿಸಲು ಆಗುತ್ತಿಲ್ಲ. ನನ್ನ ಸಾವಿಗೆ ನನ್ನ ಪತಿ ಮತ್ತು ಅತ್ತೆ ಕಾರಣ. ನಾನು ಇದ್ದರೆ ತಮ್ಮ, ತಂದೆ, ತಾಯಿಗೂ ತೊಂದರೆ. ನಮ್ಮ ಮನೆಯವರಿಗೆ ಕುಮಾರ್ ಜೀವ ಬೆದರಿಕೆ ಹಾಕಿದ್ದಾನೆ. ಮಗು ನನಗೆ ಹುಟ್ಟಿಲ್ಲ ಎಂದು ಹೇಳುತ್ತಾನೆ. ಇದನ್ನೆಲ್ಲ ಸಹಿಸಿಕೊಂಡು ಬದುಕಲು ಆಗುತ್ತಿಲ್ಲ ಎಂದು ವಿಡಿಯೋ ಮಾಡಿ ಮಗುವಿನೊಂದಿಗೆ ನಾಪತ್ತೆಯಾಗಿದ್ದರು.
ಕುಟುಂಬದವರು ಹುಡುಕಾಟ ನಡೆಸಿದ್ದರು. ಶುಕ್ರವಾರ ರಾಮನಾಥಪುರ ಸಮೀಪ ಕಾವೇರಿ ನದಿಗೆ ಒಂದೂವರೆ ವರ್ಷದ ಮಗುವಿನೊಂದಿಗೆ ಹಾರಿ ಮಹಾದೇವಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಅರಕಲಗೂಡು ತಾಲೂಕಿನ ಬೆಟ್ಟಸೋಗೆ ಬಳಿ ಮಹಾದೇವ ಮಹಾದೇವಿ ಮೃತದೇಹ ಪತ್ತೆಯಾಗಿದೆ. ಮಗುವಿನ ಮೃತದೇಹ ಇನ್ನು ಪತ್ತೆಯಾಗಿಲ್ಲ. ಕೊಣನೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
