ಬೆಂಗಳೂರು: ಮುಖ್ಯಮಂತ್ರಿಗಳ ವಿಶೇಷ ಅನುದಾನದಲ್ಲಿ 5 ಕೋಟಿ ರೂಪಾಯಿ ಕೊಡಿಸುವುದಾಗಿ ಹೇಳಿ 50 ಲಕ್ಷ ರೂ. ಪಡೆದು ವಂಚಿಸಲಾಗಿದ್ದು, ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ಇಬ್ಬರ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ.
ನಾಗರಬಾವಿ ನಿವಾಸಿ ವೆಂಕಟೇಶ್ ಬಾಬು ಅವರ ದೂರು ಆಧರಿಸಿ ಹರೀಶ್ ಮತ್ತು ಸಂದೀಪ್ ಎಂಬುವರ ವಿರುದ್ಧ ಕೇಸು ದಾಖಲಾಗಿದೆ. 2024ರ ಅಕ್ಟೋಬರ್ ನಲ್ಲಿ ದೂರುದಾರರ ಮನೆಗೆ ಹೋಗಿದ್ದ ಆರೋಪಿ ಹರೀಶ್ ಸರ್ಕಾರದ ಪ್ರಧಾನ ಕಾರ್ಯದರ್ಶಿ ಅವರ ಆಪ್ತ ಸಂದೀಪ್ ಎಂಬುವರ ಪರಿಚಯವಿದೆ. ಶಾಸಕರ ಶಿಫಾರಸು ಪತ್ರದ ಆಧಾರದ ಮೇಲೆ ಮುಖ್ಯಮಂತ್ರಿಗಳ ವಿಶೇಷ ಅನುದಾನದಲ್ಲಿ 5 ಕೋಟಿ ರೂಪಾಯಿ ಬಿಡುಗಡೆ ಮಾಡಿಸಿಕೊಡಲಾಗುವುದು. ಅದಕ್ಕೆ ಶೇಕಡ 10ರಂತೆ 50 ಲಕ್ಷ ರೂ. ಕಮಿಷನ್ ನೀಡಬೇಕೆಂದು ಹೇಳಿದ್ದಾನೆ.
2024ರ ನವೆಂಬರ್ ನಲ್ಲಿ ವೆಂಕಟೇಶ್ ಬಾಬು ಅವರಿಂದ ಆರೋಪಿಗಳು 25 ಲಕ್ಷ ರೂಪಾಯಿ ಪಡೆದುಕೊಂಡಿದ್ದಾರೆ. 2025 ರ ಮಾರ್ಚ್ ನಲ್ಲಿ ಪತ್ರ ಬಿಡುಗಡೆ ಹೆಸರಲ್ಲಿ ಬಾಕಿ ಇದ್ದ 25 ಲಕ್ಷ ರೂಪಾಯಿ ಹಣವನ್ನು ಕೂಡ ಸಂದೀಪ್ ಸರ್ಕಾರಿ ವಾಹನದಲ್ಲಿ ಡಬಲ್ ರಸ್ತೆಯ ವಿಲ್ಸನ್ ಗಾರ್ಡನ್ ಬಸ್ ಡಿಪೋ ಹತ್ತಿರ ಬಂದು ಪಡೆದುಕೊಂಡು ಹೋಗಿದ್ದಾರೆ. ಆರು ತಿಂಗಳ ಅವಧಿಯಲ್ಲಿ ಗ್ರಾಮೀಣಾಭಿವೃದ್ಧಿ ಇಲಾಖೆಯ ಮೂರು ಪತ್ರಗಳನ್ನು ನೀಡಿದ್ದಾರೆ.
ವಿಶೇಷ ಅನುದಾನ ಬಿಡುಗಡೆ ಮಾಡಿಸದೆ ಪ್ರತಿ ಬಾರಿ ಸುಳ್ಳು ಹೇಳುತ್ತಿದ್ದ ಹಿನ್ನೆಲೆಯಲ್ಲಿ ಸೆ. 19ರಂದು ವೆಂಕಟೇಶ್ ಅವರು ಆರ್.ಡಿ.ಪಿ.ಆರ್. ಕಚೇರಿಗೆ ಹೋಗಿ ವಿಚಾರಿಸಿದಾಗ ಆರೋಪಿಗಳು ನೀಡಿರುವುದು ನಕಲಿ ಪತ್ರ ಎಂದು ಗೊತ್ತಾಗಿದೆ. ಬಳಿಕ ವೆಂಕಟೇಶ್ ಬಾಬು ಪೊಲೀಸರಿಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ಕ್ರಮ ಕೈಗೊಂಡಿದ್ದಾರೆ.
