ಬೆಂಗಳೂರು: ರಾಜ್ಯಾದ್ಯಂತ ಮಳೆಯ ಪ್ರಮಾಣ ಸಂಪೂರ್ಣ ಕಡಿಮೆಯಾಗಿದ್ದು, ಚಳಿಯ ಪ್ರಮಾಣ ಹೆಚ್ಚಾಗಿದೆ. ಈ ವರ್ಷ ಸುಮಾರು 7 ತಿಂಗಳಿಗೂ ಹೆಚ್ಚು ಕಾಲ ಮಳೆಯಾಗಿದ್ದು, ಇನ್ನೂ ಒಂದು ತಿಂಗಳು ಅಲ್ಲಲ್ಲಿ ತುಂತುರು ಮಳೆ ಆಗುವ ಸಂಭವವಿದೆ.
ಕಳೆದ ಒಂದು ವಾರದಿಂದ ರಾಜ್ಯಾದ್ಯಂತ ಚಳಿ ಹೆಚ್ಚಾಗುತ್ತಿದೆ. ಮುಂಜಾನೆ ಮತ್ತು ರಾತ್ರಿ ಗರಿಷ್ಠ ತಾಪಮಾನ ಗಣನೀಯ ಕುಸಿತವಾಗುತ್ತಿದೆ. ಸದ್ಯ ರಾಜ್ಯದಲ್ಲಿ ಗರಿಷ್ಠ ಮತ್ತು ಕನಿಷ್ಠ ತಾಪಮಾನದಲ್ಲಿ ಎರಡರಿಂದ ಮೂರು ಡಿಗ್ರಿ ಸೆಲ್ಸಿಯಸ್ ನಷ್ಟು ಉಷ್ಣಾಂಶ ಕಡಿಮೆಯಾಗಿದೆ. ಗರಿಷ್ಠ ತಾಪಮಾನ ಸರಾಸರಿ 29- 30 ಡಿಗ್ರಿ ಸೆಲ್ಸಿಯಸ್, ಕನಿಷ್ಠ ತಾಪಮಾನ 18 ರಿಂದ 19 ಡಿಗ್ರಿ ಸೆಲ್ಸಿಯಸ್ ಇಳಿಕೆಯಾಗಿದೆ.
ಉತ್ತರ ಒಳನಾಡಿನ ಬೆಳಗಾವಿ, ಬೀದರ್, ಕಲಬುರಗಿ, ಯಾದಗಿರಿ, ವಿಜಯಪುರ, ಹಾವೇರಿ, ಗದಗ, ಕೊಪ್ಪಳ, ರಾಯಚೂರು ಜಿಲ್ಲೆಗಳಲ್ಲಿ ಕನಿಷ್ಠ ತಾಪಮಾನ ಸಾಕಷ್ಟು ಕುಸಿದಿದೆ. ಕಳೆದ ಒಂದು ವಾರದಲ್ಲಿ ವಿಜಯಪುರ, ಬೀದರ್ ಜಿಲ್ಲೆಯಲ್ಲಿ ಕನಿಷ್ಠ ತಾಪಮಾನ 12 ಡಿಗ್ರಿ ಸೆಲ್ಸಿಯಸ್ ವರೆಗೆ ಇಳಿಕೆಯಾಗಿದ್ದು, ಗರಿಷ್ಠ ತಾಪಮಾನ 28 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಕರಾವಳಿ ಭಾಗದಲ್ಲಿಯೂ ತಾಪಮಾನ ಕಡಿಮೆಯಾಗಿದೆ, ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಕೂಡ ತಾಪಮಾನ ಇಳಿಕೆಯಾಗಿದೆ.
ಈ ವರ್ಷ ವಾಡಿಕೆಗಿಂತ ಅತಿ ಹೆಚ್ಚು ಮಳೆಯಾಗಿದ್ದರಿಂದ ಭೂಮಿಯಲ್ಲಿ ತಂಪಿನ ವಾತಾವರಣ ಇರುತ್ತದೆ. ಕೆರೆ, ನದಿ, ಹಳ್ಳಗಳಲ್ಲಿ ನೀರು ಹೆಚ್ಚಿನ ಅವಧಿವರೆಗೆ ಇರುವುದರಿಂದ ಚಳಿಯ ಪ್ರಮಾಣ ಹೆಚ್ಚಾಗುತ್ತದೆ. ವಾತಾವರಣ ಬದಲಾವಣೆ, ಚಳಿ ಹೆಚ್ಚಿದ ಪರಿಣಾಮ ಜನರಲ್ಲಿ ಒಣ ಕೆಮ್ಮು, ಶೀತ, ನೆಗಡಿ, ಒಣ ಚರ್ಮದ ಸಮಸ್ಯೆ ಶುರುವಾಗಿದೆ.
