ನವದೆಹಲಿ: ದೆಹಲಿಯ ಕೆಂಪುಕೋಟೆ ಬಳಿ ಕಾರು ಸ್ಫೋಟ ಪ್ರಕರಣದಲ್ಲಿ 9 ಜನರು ಸಾವನ್ನಪ್ಪಿದ್ದಾರೆ. 20ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಪ್ರಕರಣದ ತನಿಖೆಯನ್ನು ಪೊಲೀಸರು ಚುರುಕುಗೊಳಿಸಿದ್ದಾರೆ.
ಕಾರು ಸ್ಫೋಟದಲ್ಲಿ ಉಗ್ರರ ಕೈವಾಡ ಶಂಕೆ ವ್ಯಕ್ತವಾಗಿದೆ. ಫರಿದಾಬಾದ್ ವೈದ್ಯ ಡಾ.ಉಮರ್ ಯು ನಬಿ ಆತ್ಮಹತ್ಯಾ ಬಾಂಬರ್ ಆಗಿ ಕೆಲಸ ಮಾಡಿರುವ ಶಂಕೆ ವ್ಯಕ್ತವಾಗಿದೆ. ಫರಿದಾಬಾದ್ ಮಾಡ್ಯೂಲ್ ಜೊತೆ ಸಂಬಂಧಹೊಂದಿದ್ದ ಪುಲ್ವಾಮಾ ಮೂಲದ ಉಮರ್ ನಬಿ ಕಾರಿನಲ್ಲಿ ಇದ್ದಿರಬಹುದು ಎಂಬ ಅನುಮಾನ ವ್ಯಕ್ತವಾಗಿದೆ.
ಜಮ್ಮು-ಕಾಶ್ಮೀರ ಪೊಲೀಸರು ತನ್ನ ತಂಡದ ಸದಸ್ಯರನ್ನು ಬಂಧಿಸಿದ ವಿಚಾರ ಗೊತ್ತಾಗಿ ಪರಾರಿಯಾಗಿದ್ದ ಉಮರ್ ನಬಿ ತಾನೂ ಬಂಧನವಾಗುವ ಭೀತಿಯಲ್ಲಿ ಸೋಮವಾರ ಏಕಾಂಗಿಯಾಗಿ ತನ್ನ ಬಳಿ ಇರುವ ಸ್ಫೋಟಕಗಳನ್ನು ಬಳಸಿ ಈ ಕೃತ್ಯವೆಸಗಿರುವ ಸಾಧ್ಯತೆ ಇದೆ ಎನ್ನಲಾಗಿದೆ. ಪ್ರಕರಣ ಸಂಬಂಧ ಉಮರ್ ನಬಿ ಮನೆಯ ಸದಸ್ಯರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ.
ದೆಹಲಿಯ ಕೆಂಪುಕೋಟೆ ಮೆಟ್ರೋ ನಿಲ್ದಾಣದ ಬಳಿ ಸೋಮವಾರ ಸಂಜೆ ಹುಂಡೈ i20 ಕಾರಿನಲ್ಲಿ ಸ್ಫೋಟ ಸಂಭವಿಸಿತ್ತು. ಘಟನೆಯಲ್ಲಿ ೯ ಜನರು ಮೃತಪಟ್ಟಿದ್ದಾರೆ 20ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.
