ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯ ಕೆಂಪುಕೋಟೆ ಬಳಿ ಕಾರ್ ನಲ್ಲಿ ಸ್ಪೋಟ ಸಂಭವಿಸಿದ್ದು, 8 ಜನ ಸಾವನ್ನಪ್ಪಿದ್ದಾರೆ. 24ಕ್ಕೂ ಅಧಿಕ ಮಂದಿ ಗಂಭೀರವಾಗಿ ಗಾಯಗೊಂಡಿದ್ದು, ಮೂವರ ಸ್ಥಿತಿ ಚಿಂತಾಜನಕವಾಗಿದೆ.
ದೆಹಲಿಯ ಲೋಕನಾಯಕ ಜಯಪ್ರಕಾಶ್ ನಾರಾಯಣ್ ಆಸ್ಪತ್ರೆ ಸೇರಿದಂತೆ ಸಮೀಪದ ಆಸ್ಪತ್ರೆಗಳಿಗೆ ಗಾಯಾಳುಗಳನ್ನು ದಾಖಲಿಸಲಾಗಿದೆ.
ಸ್ಫೋಟದ ತೀವ್ರತೆಗೆ ರಸ್ತೆಯಲ್ಲಿ ಮೃತದೇಹಗಳು, ಅಂಗಾಂಗಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ. ಸ್ಪೋಟದಲ್ಲಿ 8 ಜನ ಸಾವನ್ನಪ್ಪಿದ್ದಾರೆ.
ದೆಹಲಿ, ಮುಂಬೈ ಸೇರಿ ಹಲವೆಡೆ ಹೈಅಲರ್ಟ್ ಘೋಷಣೆ ಮಾಡಲಾಗಿದೆ. ಕೆಂಪುಕೋಟೆ ಸುತ್ತಮುತ್ತಲಿನ ರಸ್ತೆಗಳನ್ನು ಬಂದ್ ಮಾಡಲಾಗಿದೆ. ಚಾಂದಿನಿ ಚೌಕ್, ಮಾರ್ಕೆಟ್ ರಸ್ತೆ, ಸಂಸತ್ ಭವನ, ಇಂಡಿಯಾ ಗೇಟ್ ಸುತ್ತ ಹೈ ಅಲರ್ಟ್ ಘೋಷಿಸಲಾಗಿದ್ದು, ಹೆಚ್ಚುವರಿ ಭದ್ರತೆ ಕೈಗೊಳ್ಳಲಾಗಿದೆ.
ನವದೆಹಲಿ, ಮುಂಬೈ, ಬೆಂಗಳೂರು ನಗರ, ಉತ್ತರ ಪ್ರದೇಶ ಸೇರಿದಂತೆ ದೇಶದ ಎಲ್ಲಾ ರಾಜ್ಯಗಳಲ್ಲೂ ಹೈಅಲರ್ಟ್ ಘೋಷಿಸಲಾಗಿದೆ. ಜನನಿಬಿಡ ಪ್ರದೇಶಗಳಲ್ಲಿ ಕಟ್ಟೆಚ್ಚರ ವಹಿಸುವಂತೆ ಕೇಂದ್ರ ಸರ್ಕಾರದಿಂದ ಎಲ್ಲಾ ರಾಜ್ಯಗಳಿಗೆ ಸೂಚನೆ ನೀಡಲಾಗಿದೆ.
ರಾಜ್ಯದಲ್ಲೂ ಕಟ್ಟೆಚ್ಚರ ವಹಿಸಲು ಎಲ್ಲಾ ಎಸ್‌ಪಿಗಳಿಗೆ ಡಿಜಿಪಿ ಎಂ.ಎ. ಸಲೀಂ ಸೂಚನೆ ನೀಡಿದ್ದಾರೆ. ವಿಮಾನ ನಿಲ್ದಾಣ, ರೈಲು ನಿಲ್ದಾಣ, ಬಸ್ ನಿಲ್ದಾಣ, ಮಾರುಕಟ್ಟೆ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಕಟ್ಟೆಚ್ಚರ ವಹಿಸುವಂತೆ ಸೂಚಿಸಲಾಗಿದೆ. ಎಲ್ಲಾ ಎಸ್ಪಿಗಳಿಗೆ ಡಿಜಿ ಐಜಿಪಿ ಆದೇಶ ನೀಡಿದ್ದಾರೆ.
