ಬೆಂಗಳೂರು : ಜಾತಿ ಗಣತಿ ಸಮೀಕ್ಷೆದಾರರಿಗೆ ಗುಡ್ ನ್ಯೂಸ್ ಎಂಬಂತೆ ಸರ್ಕಾರ ಗೌರವಧನ ಬಿಡುಗಡೆ ಮಾಡಿ ಆದೇಶ ಹೊರಡಿಸಿದೆ. ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದಿಂದ ಉಲ್ಲೇಖ(1)ರ ಆದೇಶದನ್ವಯ ರಾಜ್ಯಾದ್ಯಂತ ಎಲ್ಲಾ ನಾಗರಿಕರ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯನ್ನು ಕೈಗೊಳ್ಳಲಾಗಿರುತ್ತದೆ.ಉಲ್ಲೇಖ (2)ರ ಆದೇಶದಲ್ಲಿ ಆಯೋಗದಿಂದ ಕೈಗೊಂಡಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷಾ ಕಾರ್ಯಕ್ಕೆ ಅನುದಾನವನ್ನು ಬಿಡುಗಡೆ ಮಾಡಲಾಗಿದೆ.
ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ವತಿಯಿಂದ ರಾಜ್ಯದ ಎಲ್ಲಾ ನಾಗರಿಕರ ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಗಳ ಬಗ್ಗೆ ಕೈಗೊಳ್ಳಲಾಗುವ ಸಮೀಕ್ಷೆಯಲ್ಲಿ ಪಾಲ್ಗೊಳ್ಳುವ ಸಮೀಕ್ಷಾದಾರರು ಮತ್ತು ಮೇಲ್ವಿಚಾರಕರಿಗೆ ಈ ಕೆಳಕಂಡಂತೆ ಗೌರವಧನವನ್ನು ನಿಗದಿಪಡಿಸಿ ಆದೇಶಿಸಿದೆ.
ಪ್ರಸ್ತಾವನೆಯಲ್ಲಿ ವಿವರಿಸಿರುವಂತೆ, ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದಿಂದ ಕೈಗೊಂಡಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ಕಾರ್ಯನಿರ್ವಹಿಸಿರುವ ಸಮೀಕ್ಷಾದಾರರಿಗೆ (GBA ಹೊರತುಪಡಿಸಿ) ಅನುಬಂಧದಲ್ಲಿ ವಿವರಿಸಿರುವಂತೆ ರಾಜ್ಯದ ಎಲ್ಲಾ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ಒಟ್ಟು ರೂ.1,27,73,45,200 (ನೂರ ಇಪ್ಪತ್ತೇಳು ಕೋಟಿ ಎಪ್ಪತ್ತೂರು ಲಕ್ಷಗಳ ನಲವತ್ತೈದು ಸಾವಿರದ ಇನ್ನೂರು ರೂಪಾಯಿಗಳು ಮಾತ್ರ) ಗಳನ್ನು ಈ ಕೆಳಗಿನ ಷರತ್ತುಗಳಿಗೆ ಒಳಪಟ್ಟು ಬಿಡುಗಡೆ ಮಾಡಿ ಆದೇಶಿಸಿದೆ.
ಷರತ್ತುಗಳು:
- ಒಂದು ಮತ್ತು ಎರಡು ಸದಸ್ಯರಿರುವ ಮನೆಗಳನ್ನು ಸಮೀಕ್ಷೆ ಮಾಡಿರುವ ಬಗ್ಗೆ ತಲಾ ರೂ.50/-ರಂತೆ ಹಾಗೂ ಮೂರು ಮತ್ತು ಮೂರಕ್ಕಿಂತ ಹೆಚ್ಚು ಸದಸ್ಯರಿರುವ ಮನೆಗಳನ್ನು ಸಮೀಕ್ಷೆ ಮಾಡಿರುವ ಬಗ್ಗೆ ತಲಾ ರೂ.100/- ರಂತೆ ಪಾವತಿಸುವುದು.
- EDCS ನಿಂದ ಪಡೆದಿರುವಂತೆ ಸಮೀಕ್ಷಾದಾರರ ಹೆಸರು ಮತ್ತು ಅವರಿಗೆ ಪಾವತಿಸಬೇಕಾಗಿರುವ ಮೊತ್ತದ ವಿವರವನ್ನು ಜಿಲ್ಲಾವಾರು ಪ್ರತ್ಯೇಕವಾಗಿ ನೀಡಲಾಗಿದೆ.
- ಸಮೀಕ್ಷೆಗೆ ಸಂಬಂಧಿಸಿದಂತೆ ಬಿಡುಗಡೆ ಮಾಡಲಾಗುವ ಅನುದಾನ ಹಾಗೂ ವೆಚ್ಚದ ವಿವರಗಳನ್ನು ಪ್ರತ್ಯೇಕವಾಗಿ ನಿರ್ವಹಿಸುವುದು ಹಾಗೂ ನಿಯಮಾನುಸಾರ ವೆಚ್ಚಗಳನ್ನು ಭರಿಸಿದ ನಂತರ ಹಣ ವಿನಿಯೋಗ ಪ್ರಮಾಣ ಪತ್ರವನ್ನು ಆಯೋಗಕ್ಕೆ ಸಲ್ಲಿಸುವುದು.




